ನ್ಯೂಸ್ ನಾಟೌಟ್: ಕರೆಯದೆ ಮದುವೆ ಮನೆಗೆ ಊಟಕ್ಕೆ ಹೋಗಬೇಡ ಅನ್ನುವ ಮಾತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಕರೆಯದೇ ಮದುವೆ ಮನೆಗೆ ಊಟಕ್ಕೆ ಹೋಗಿ ಶಿಕ್ಷೆ ಅನುಭವಿಸಿ ಸುದ್ದಿಯಾಗಿದ್ದಾನೆ.
ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಎಲ್ಲರೂ ಪರಿಚಿತರೇ ಆಗಿರುತ್ತಾರೆ. ಪರಿಚಿತರಲ್ಲದವರು ಬಂದು ಊಟ ಮಾಡಿದರೂ ಯಾರೂ ಏನೂ ಮಾತನಾಡುವುದಿಲ್ಲ. ಹೋಗ್ಲಿ ಬಿಡಿ ಊಟ ಮಾಡಿಕೊಂಡು ಅಂತ ಸುಮ್ಮನಾಗ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಊಟ ಮಾಡಿದ ಅನ್ನುವ ಒಂದೇ ಕಾರಣಕ್ಕೆ ಆತನನ್ನು ಹಿಡಿದು ಅವಮಾನ ಮಾಡಿ ಪಾತ್ರೆ ತೊಳೆಸಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈತ ಭೋಪಾಲ್‌ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಈತ ಕಾಲೇಜಿನ ಸಮೀಪದಲ್ಲಿರುವ ಮದುವೆ ಮನೆಗೆ ಹೋಗಿ ಹೊಟ್ಟೆ ತುಂಬಾ ಊಟ ಮಾಡಿದ್ದಾನೆ. ಈ ವಿಚಾರ ಮದುವೆ ಮನೆಯವರಿಗೆ ತಿಳಿದ ನಂತರ ಆತನನ್ನು ಹಿಡಿದು ಪಾತ್ರೆ ತೊಳೆಸುವ ಶಿಕ್ಷೆ ನೀಡಿದ್ದಾರೆ. ಆದೆರೆ ಆತ ತಾನು ಇಷ್ಟ ಪಟ್ಟೇ ಈ ಕೆಲಸ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಆತ ಹೇಳಿದ್ದಾನೆ. ಇದನ್ನು ಬಲವಂತವಾಗಿಯೇ ಆತನ ಕೈನಲ್ಲಿ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯ ಈ ವಧು-ವರರ ಕುಟುಂಬಕ್ಕೆ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.