ನ್ಯೂಸ್ ನಾಟೌಟ್ : 2008ರ ನವೆಂಬರ್ 26ರಂದು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಅದರಂತೆ ಮತ್ತೊಂದು ದಾಳಿ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದ್ದು, ಅಪರಿಚಿತ ಕರೆ ಬಂದ ಬೆನ್ನಲ್ಲೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದು, ಈ ಕರೆ ಮಾಡಿರುವುದು ಯಾರು? ಎಲ್ಲಿಂದ ಬಂದಿದೆ ಎಂಬುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ಶುರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಮುಂಬೈ ಪೊಲೀಸರಿಗೆ ಬಂದ ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ, ತನ್ನ ಗೆಳೆಯನಿಗೋಸ್ಕರ ಸೀಮಾ ಹೈದರ್ ಎಂಬ ಮಹಿಳೆ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. ನೀವು ಆ ಮಹಿಳೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ ಕೊಡದಿದ್ದರೆ 26/11 ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕಾ ದಾಳಿಯಂತೆ ಮತ್ತೊಮ್ಮೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಕರೆ ಬಂದ ಹಿನ್ನೆಲೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುಂಬೈ ಪೊಲೀಸರು, ‘ಬುಧವಾರ ಪೊಲೀಸ್ ಕಂಟ್ರೋಲ್ ರೂಮ್‌ಗೆ ಅಪರಿಚಿತ ಕರೆ ಬಂದಿತ್ತು. ಈ ಕಾಲ್ ರಿಸೀವ್ ಮಾಡಿದಾಗ ಆ ಕಡೆಯಿಂದ ವ್ಯಕ್ತಿಯೊಬ್ಬ, ಸೀಮಾ ಹೈದರ್ ನನ್ನು ವಾಪಸ್ ಪಾಕಿಸ್ತಾನಕ್ಕೆ ಆದಷ್ಟು ಬೇಗ ಕಳುಹಿಸಿಕೊಡಿ. ಒಂದು ವೇಳೆ ನೀವು ಕಳುಹಿಸಿ ಕೊಡದಿದ್ದರೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯಂತೆ ಮತ್ತೊಂದು ದಾಳಿಯನ್ನು ಎದುರಿಸಲು ಸಿದ್ಧರಾಗಿ’ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸದ್ಯ ಮುಂಬೈ ಪೊಲೀಸ್ ಹಾಗೂ ಕ್ರೈಂ ಬ್ರ್ಯಾಂಚ್ ತಂಡ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ನಡೆಸುತ್ತಿದ್ದು, ಕರೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಲು ತಂಡ ರಚಿಸಿ ಶೋಧ ಕಾರ್ಯ ಚುರುಕುಗೊಳಿಸಿದೆ.