ಮಂಗಳೂರು: ನಗರದ ನಿವಾಸಿಯೊಬ್ಬ ತನ್ನ ಪತ್ನಿ ಮತ್ತು ಮಗನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ರಮೇಶ್ ಬಂಗೇರ ಎಂದು ಗುರುತಿಸಲಾಗಿದೆ. ಆರೋಪಿಯು ಆತನ ಪತ್ನಿ ಬೇಬಿ ಕುಂದರ್ ಮತ್ತು ಮಗ ಅಶ್ವಿನ್ ಕುಮಾರ್ ಗೆ ಗಾಯ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ. ರಮೇಶ್ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿ ಕೈಯಲ್ಲಿ ಚಾಕು ಹಿಡಿದು ಮಗನಿಗೆ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದ್ದಾನೆ, ಆಗ ಬೇಬಿ ತನ್ನ ಎಡಗೈಯಿಂದ ಚಾಕುವನ್ನು ತಡೆದಾಗ ಗಾಯಗೊಂಡಿದ್ದಾರೆ. ಈ ವೇಳೆ ಅಶ್ವಿನ್ ತನ್ನ ತಂದೆಯನ್ನು ತಡೆಯಲು ಯತ್ನಿಸಿದಾಗ ರಮೇಶ್ ಚಾಕುವಿನಿಂದ ಬಲಗೈಗೆ ಗಾಯಗೊಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.