ನ್ಯೂಸ್ ನಾಟೌಟ್: ನ್ಯಾಯಾಲಯದ ತೀರ್ಪಿನಂತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಕೆಎಸ್ ಆರ್ ಟಿಸಿ ಬಸ್ಸನ್ನೇ ಸಾಗರ ನ್ಯಾಯಾಲಯದ ಆದೇಶದಂತೆ ಜಫ್ತಿ ಮಾಡಿದ ಘಟನೆ ಇಂದು(ಮಾ.18) ನಡೆದಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯದ ಆದೇಶದಂತೆ ಕೆಎಸ್ ಆರ್ ಟಿಸಿ ಶಿರಸಿ ಡಿಪೋ ಪರಿಹಾರ ನೀಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
2022ನೇ ಸಾಲಿನ ಜುಲೈ 7ರಂದು ಬೆಳಿಗ್ಗೆ 5:30ರ ವೇಳೆಗೆ ಗಣೇಶ್ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್ ನಲ್ಲಿ ತೆರಳುತ್ತಿದ್ದಾಗ ಪ್ರವಾಸಿ ಮಂದಿರದ ಎದುರು KSRTC ಬಸ್ ಸೈಕಲ್ ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮದಿಂದಾಗಿ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಮೃತ ಗಣೇಶನ ಪೋಷಕರು ಅಪಘಾತಕ್ಕೆ ಪರಿಹಾರ ಕೋರಿ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಗಣೇಶ್ ಪೋಷಕರಿಗೆ ಮೂರು ತಿಂಗಳಿನೊಳಗೆ ಪರಿಹಾರ ನೀಡುವಂತೆ 2024ರ ಜುಲೈ 8 ರಂದು ನ್ಯಾಯಾಲಯ ಆದೇಶಿಸಿತ್ತು. ಮೂರು ತಿಂಗಳು ಕಳೆದರೂ ಕೆಎಸ್‌ಆರ್‌ಟಿಸಿ ಪರಿಹಾರ ನೀಡದ ಕಾರಣ ಗಣೇಶನ ತಾಯಿ ಉಮಾ ನ್ಯಾಯಾಲಯಕ್ಕೆ ಅಮಲ್ಜಾರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ನೋಟಿಸ್ ಜಾರಿ ಆದ ನಂತರವೂ ಕೆಎಸ್‌ಆರ್‌ಟಿಸಿ ಪರಿಹಾರದ ಹಣ ಪಾವತಿಸದ ಕಾರಣ ಶಿರಸಿ ಡಿಪೋಗೆ ಸೇರಿದ ಬಸ್ಸನ್ನು ಜಫ್ತಿ ಮಾಡಲಾಗಿದೆ. ಜಫ್ತಿ ಮಾಡಲಾದ ಬಸ್ಸನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.
ಇದನ್ನೂ ಓದಿ: