ನ್ಯೂಸ್ ನಾಟೌಟ್: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಈ ಸುದ್ದಿ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡವರಾಗಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ದಿನಗೂಲಿ ನೌಕರರ ದಂಪತಿಗೆ ಸುರೇಂದ್ರನ್ ಜನಿಸಿದರು. ಶಾಲೆ, ಕಾಲೇಜು ದಿನಗಳಲ್ಲಿ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಸುರೇಂದ್ರನ್ ಬಿಡಿ ಕಟ್ಟುವ ಕೆಲಸ ಮಾಡುತ್ತಿದ್ದರು. ‘ಬಡತನದ ಕಾರಣ 10ನೇ ತರಗತಿ ಬಳಿಕ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹಾಗಾಗಿ ಒಂದು ವರ್ಷ ಬೀಡಿ ಕಟ್ಟುವ ಕೆಲಸವನ್ನು ಮುಂದುವರೆಸಿದೆ. ಈ ಕಷ್ಟದ ದಿನಗಳಲ್ಲಿ ನಾನು ಏನಾದರು ಸಾಧಿಸಬೇಕು ಎಂಬ ಆಸೆ ಮೂಡಿತು. ಮುಂದೆ ಮನೆಯಲ್ಲಿ ಓದುವುದಾಗಿ ಹೇಳಿ ಕಾಲೇಜಿಗೆ ಸೇರಿದೆ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಲೇಜು ಶಿಕ್ಷಣದಲ್ಲೂ ಆರ್ಥಿಕ ಸಂಕಷ್ಟದಿಂದಾಗಿ ತೊಂದರೆ ಅನುಭವಿಸಿದ್ದರು. 1995ರಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು. ನಂತರ ಸುಪ್ರೀಂ ಕೋರ್ಟ್‌ನಲ್ಲೂ ವಕೀಲರಾಗಿ ಕೆಲಸ ಮಾಡಿದರು. ಸುರೇಂದ್ರನ್ ಪತ್ನಿ ನರ್ಸ್ ಆಗಿದ್ದರು. 2007ರಲ್ಲಿ ಅವರ ಕುಟುಂಬಕ್ಕೆ ಅಮೆರಿಕ ಹೋಗುವ ಅವಕಾಶ ದೊರೆಯಿತು. ಅಲ್ಲಿಗೆ ಹೋದ ಬಳಿಕ ಟೆಕ್ಸಾಸ್ ಬಾರ್ ಪರೀಕ್ಷೆ ತೆಗೆದುಕೊಂಡರು. ಕೆಲ ವಾಣಿಜ್ಯ ಮಳಿಗೆಗಳಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಓದಿದ ಅವರು ಬಾರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದರು. ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಮೊದಲ ಯತ್ನದಲ್ಲೇ ಉತ್ತೀರ್ಣರಾದರು. ನಂತರ ಟೆಕ್ಸಾಸ್ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿದರು. ಜನವರಿ 1ರಂದು ಇಲ್ಲಿನ ಕೌಂಟಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.