ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರವನ್ನು ಭಾನುವಾರ ನಡೆಸಲು ಸರಕಾರ ನಿರ್ಧರಿಸಿದೆ. ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಷಯವನ್ನು ತಿಳಿಸಿದ್ದಾರೆಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ಸದ್ಯ ಪುನೀತ್ ಅವರ ಮಗಳು ದ್ರತಿ ಅಮೆರಿಕದಿಂದ ಹೊರಟು ದಿಲ್ಲಿ ತಲುಪಿದ್ದಾರೆ. ಇನ್ನೆರಡು ಗಂಟೆಯಲ್ಲಿ ಅವರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ತಲುಪಲಿದ್ದಾರೆ. ಇಂದು ಸಂಜೆಯೇ ಅಂತ್ಯಕ್ರಿಯೆ ನಡೆಯಬೇಕಿತ್ತು. ಆದರೆ ಅಭಿಮಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರಿಗೂ ನಿರಾಶೆ ಆಗಬಾರದು ಅನ್ನುವ ಕಾರಣಕ್ಕೆ ಒಂದು ದಿನ ಮುಂದೂಡಿಕೆ ಮಾಡಲಾಗಿದೆ ಎಂದು ರಾಕ್ ಲೈನ್ ತಿಳಿಸಿದ್ದಾರೆ.