ನ್ಯೂಸ್ ನಾಟೌಟ್: ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕಾದ ಅಧಿಕಾರಿಗಳಿಗೆ ತುಕ್ಕು ಹಿಡಿದ್ರೆ ಏನೆಲ್ಲಆಗಬಹುದು ಅನ್ನುವುದಕ್ಕೆ ಸಂಪಾಜೆ ಗ್ರಾಮ ಪ್ರತ್ಯಕ್ಷ ಉದಾಹರಣೆಯಾಗಿದೆ.
ಕಳೆದ ಭಾರಿಯ ಪ್ರವಾಹಕ್ಕೆ ಸಿಲುಕಿ ಸಂಪಾಜೆಯ ನೂರಾರು ಮನೆ, ಅಂಗಡಿಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು. ಭಾರಿ ಅನಾಹುತವಾದ ಬಳಿಕ ರಾಜಕಾರಣಿಗಳು ಚೆಕ್ ಹಿಡಿದುಕೊಂಡು ಮನೆಮನೆಗೆ ಪಾದಯಾತ್ರೆ ಮಾಡಿದ್ದರು. ಜನ ಬೀದಿಗೆ ಬಿದ್ದಿದ್ದರು, ಹಲವಾರು ಮಂದಿ ಗಂಜಿ ಕೇಂದ್ರದಲ್ಲಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದೆಲ್ಲ ಕಳೆದು ಒಂದು ವರ್ಷವಾಗಿದೆ. ಮತ್ತೆ ಮಳೆರಾಯನ ಆಗಮನಕ್ಕೆ ಎಲ್ಲ ರೀತಿಯ ವಾತಾವರಣವೂ ಒಂದುಗೂಡಿದೆ. ಆದರೆ ಕಳೆದ ವರ್ಷದ ಹೂಳೆತ್ತದೆ ಇದ್ದುದರಿಂದ ಸಂಪಾಜೆಯ ಚೌಕಿಯಿಂದ ಹಿಡಿದು ಕಲ್ಲುಗುಂಡಿಯ ಕೂಲಿಶೆಡ್ ತನಕ ಜನರಿಗೆ ವಿಪರೀತ ಆತಂಕದಲ್ಲಿ ಬದುಕುವಂತಾಗಿದೆ. ಹೂಳೆತ್ತದೆ ಹೋದರೆ ಈ ಸಲವೂ ಮಳೆ ನೀರು ಸಿಕ್ಕಿಸಿಕ್ಕಿದಲ್ಲಿ ನುಗ್ಗುವ ಆತಂಕವಿದೆ.
ವರದಿ ಮಾಡಿದ್ರೂ ಉದಾಸೀನ
ನ್ಯೂಸ್ ನಾಟೌಟ್ ಚಾನಲ್ ಹಾಗೂ ವೆಬ್‌ಸೈಟ್‌ನಲ್ಲಿ ಹೂಳೆತ್ತದೆ ಇರುವ ಬಗ್ಗೆ ಇತ್ತೀಚೆಗೆ ವರದಿ ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೇ ಗಣಿ ಇಲಾಖೆಗೆ ಊರಿನವರು ಕೈಯಿಂದ ದುಡ್ಡು ಹಾಕಿ ಸರ್ವೆ ಮಾಡಿ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ಅದು ಸುಳ್ಯದ ಸರ್ವೆ ಇಲಾಖೆಗೆ ಬಂದಿದೆ. ಆದರೆ ಇಷ್ಟು ದಿನಗಳಾದರೂ ಇಲಾಖೆಯಿಂದ ಹೂಳೆತ್ತುವ ಬಗ್ಗೆ ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದ ಗ್ರಾಮದ ಜನ ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಮಳೆ ಶುರುವಾಗುವ ಮೊದಲೇ ಮನೆ ಬಿಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಸಂಪಾಜೆ ಮತ್ತೊಮ್ಮೆ ಮುಳುಗಿದ್ರೆ ಅದಕ್ಕೆ ಸರ್ವೆ ಇಲಾಖೆ ಕಾರಣವಾಗುತ್ತದೆ ಅನ್ನುವುದನ್ನು ಅಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮಳೆಗಾಲಕ್ಕೂ ಮೊದಲೇ ಹೂಳೆತ್ತುವ ಕಾರ್ಯ ನಡೆಸಲಾಗುತ್ತದೆಯೇ ಅನ್ನುವುದನ್ನು ಕಾದು ನೋಡಬೇಕಿದೆ.