ಕಲ್ಲುಗುಂಡಿ: ಭಾರಿ ಗಾಳಿ ಮಳೆಗೆ ಕಲ್ಲುಗುಂಡಿಯ ಮುಖ್ಯ ಪೇಟೆಯ ಚರ್ಚ್ ರಸ್ತೆಯಲ್ಲಿರುವ ತೆಂಗಿನ ಮರವೊಂದು ಧರೆಗೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಸಂಜೆ ನಡೆದಿದೆ. ಈ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಾಯಾಳುವನ್ನು ಕಳಮೆ ಬಾಲಕೃಷ್ಣ (55) ಎಂದು ಗುರುತಿಸಲಾಗಿದೆ. ಗಾಳಿ ಬೀಸಿದ ಸಮಯದಲ್ಲಿ ಚರ್ಚ್ ರಸ್ತೆಯಲ್ಲಿದ್ದ ತೆಂಗಿನ ಮರ ಧರೆಗುರುಳಿತು. ಅದೃಷ್ಟವಷಾತ್ ವಿದ್ಯುತ್ ಲೈನ್ ಗೆ ತಾಗಿ ತೆಂಗಿನ ಮರ ನೇತಾಡಿತು. ಹೀಗಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಗಾಯಾಳುವನ್ನು ಪರೀಕ್ಷಿಸಿದ ಸ್ಥಳೀಯ ಕ್ಲಿನಿಕ್ ನ ವೈದ್ಯರು ಸುಳ್ಯದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೆಂಗಿನ ಮರ ಬಿದ್ದಿರುವುದರ ಪರಿಣಾಮ ಅಕ್ಕಪಕ್ಕದ ಮನೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.