ಕಡಬ: ಕಡಬದಲ್ಲಿ ಇತ್ತೀಚೆಗೆ ಆರಂಭವಾಗಿರುವ ಹೋಟೆಲ್‌ವೊಂದರಲ್ಲಿ ಕೆಲಸಕ್ಕಿದ್ದ ಪಿರಿಯಾಪಟ್ಟಣದ ವ್ಯಕ್ತಿಯೊಬ್ಬ ಸ್ಥಳೀಯರಿಂದ ಲಕ್ಷಾಂತರ ರೂ. ಸಾಲ ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಮೈಸೂರು ಪಿರಿಯಾಪಟ್ಟಣ ನಿವಾಸಿ ಶರತ್ ಬಾಬು ಎಂಬಾತನೇ ಪರಾರಿಯಾದ ವ್ಯಕ್ತಿ ಎನ್ನಲಾಗಿದೆ. ಸ್ಥಳೀಯರೊಂದಿಗೆ ಸ್ನೇಹ ಸಂಪಾದಿಸಿ ಲಕ್ಷಾಂತರ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ವಂಚನೆಗೊಳಗಾದ ವ್ಯಕ್ತಿಗಳು ಈತನ ಮೂಲ ಹುಡುಕಿದಾಗ ಈತ ಮನೆ ಬಿಟ್ಟು 10 ವರ್ಷಗಳೇ ಕಳೆದಿವೆ ಎಂದು ತಿಳಿದು ಬಂದಿದೆ. ಹೋಟೆಲ್ ನಲ್ಲಿ ಅಡುಗೆ ಕೆಲಸಗಾರನಾಗಿ ಸೇರಿಕೊಂಡು ಈತನು ಮಾಲಿಕರ ಸ್ನೇಹ ಬೆಳೆಸಿದ್ದ. ಸ್ಥಳೀಯವಾಗಿ ಉನ್ನತ ಸ್ಥಾನದಲ್ಲಿ ಇರುವ ಹಲವಾರು ಜನರನ್ನು ತನ್ನ ಮಾತಿನ ಮೋಡಿಯ ಮೂಲಕ ವಂಚಿಸಿ ಹಣ ಚಿನ್ನಾಭರಣಗಳು, ವಾಹನ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿ ಸುಮಾರು ಹತ್ತು ಲಕ್ಷದ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಅಂದಾಜಿಸಲಾಗಿದೆ.