ನ್ಯೂಸ್ ನಾಟೌಟ್ : ನಾವು ಪ್ರತಿನಿತ್ಯ ಸಿಹಿ ತಿನಿಸುಗಳನ್ನು ಸೇವಿಸುತ್ತೇವೆ. ಸಕ್ಕರೆ ಹಾಕಿದ ಚಹಾ, ಕಾಫಿ, ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಸಕ್ಕರೆ ಬಳಸಿದ ಆಹಾರ ಪದಾರ್ಥಗಳು ಅಥವಾ ತಂಪು ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ? ಹಾಗಿದ್ದರೆ ಸಕ್ಕರೆ ಬದಲು ಏನು ಸೇವಿಸಿದರೆ ಉತ್ತಮ ಅನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ.
ಬೆಲ್ಲ ಸೇವನೆಯಿಂದ ಹಲವು ಪ್ರಯೋಜನ..!
ಬೆಲ್ಲ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಚರ್ಮದ ಮೇಲೆ ಯಾವುದೇ ರೀತಿಯ ಅಲರ್ಜಿ ಅಥವಾ ದೇಹದ ಒಳ ಭಾಗದಲ್ಲಿ ಉಸಿರಾಟದ ತೊಂದರೆ ಮತ್ತು ಅಸ್ತಮಾ ಉಂಟಾಗದಂತೆ ನೋಡಿಕೊಳ್ಳುತ್ತದೆ. ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಿರುತ್ತದೆ.
ಮುಖದ ಮೇಲಿನ ಮೊಡವೆಗಳನ್ನು ಮತ್ತು ಕಲೆಗಳನ್ನು ಇದು ಹೋಗಲಾಡಿಸುತ್ತದೆ. ಪ್ರತಿ ದಿನ ಊಟ ಆದ ಮೇಲೆ ಒಂದು ತುಂಡು ಬೆಲ್ಲ ಸೇವಿಸುವುದರಿಂದ ದೇಹದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮೆಟಬಾಲಿಸಂ ವೃದ್ಧಿಸುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳು ಹೊರ ಹೋಗಲು ಸಹಾಯವಾಗುತ್ತದೆ. ಚರ್ಮದ ಮೇಲೆ ಕಂಡುಬರುವ ಸುಕ್ಕುಗಳು, ಗೆರೆಗಳು ಅಥವಾ ವಯಸ್ಸಾದಂತೆ ಕಂಡು ಬರುವ ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ. ಎರಡು ಟೀ ಚಮಚ ಜೇನುತುಪ್ಪ, ಒಂದು ಟೀ ಚಮಚ ನಿಂಬೆಹಣ್ಣಿನ ರಸ, ಎರಡು ಟೀ ಚಮಚ ಜಜ್ಜಿದ ಬೆಲ್ಲ ಎಲ್ಲವನ್ನು ಮಿಶ್ರಣ ಮಾಡಿ ನಯವಾದ ಪೇಸ್ಟ್ ತಯಾರಿಸಿಕೊಳ್ಳಬೆಕು. ಇದನ್ನು ಮುಖದ ಚರ್ಮದ ಮೇಲೆ ಹಚ್ಚಿ ಹತ್ತು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ನಂತರ ನೀರಿನಲ್ಲಿ ತೊಳೆದುಕೊಂಡರೆ ಚರ್ಮದ ಹೊಳಪು ಹೆಚ್ಚುತ್ತದೆ.
ಒಂದು ಟೇಬಲ್ ಚಮಚ ಬೆಲ್ಲದ ಪುಡಿ ತೆಗೆದುಕೊಂಡು ಅಷ್ಟೇ ಪ್ರಮಾಣದ ಟೊಮ್ಯಾಟೋ ಜ್ಯೂಸ್ ಜೊತೆಗೆ ಮಿಶ್ರಣ ಮಾಡಿ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸ, ಸ್ವಲ್ಪ ಅರಿಶಿನ ಪುಡಿ ಮಿಶ್ರಣ ಮಾಡಿ.ಮುಖದ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದುಕೊಂಡರೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಗೆ ಹೆಚ್ಚು ಹೊಳಪು ನೀಡುತ್ತದೆ.