ಸುಳ್ಯ

ಸುಳ್ಯದ ಮೀನು ವ್ಯಾಪಾರಿ ಹೆಸರು ಹೇಳಿಕೊಂಡು ಕಳೆದೊಂದು ವಾರದಿಂದ ಇಬ್ಬರು ವ್ಯಕ್ತಿಗಳಿಂದ ಹಣ ಸಂಗ್ರಹ..! ಅನುಮಾನಗೊಂಡ ಸಾರ್ವಜನಿಕರಿಂದ ಪೊಲೀಸ್ ದೂರು, ಠಾಣೆಯಲ್ಲಿ ತೀವ್ರ ವಿಚಾರಣೆ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹಣ ಮಾಡೋದು ಕೆಲವರಿಗೆ ದಂಧೆಯಾಗಿ ಬಿಟ್ಟಿದೆ. ಸುಲಭವಾಗಿ ಹೇಗೆ ಹಣ ಸಿಗುತ್ತೆ ಅನ್ನುವುದನ್ನೇ ಕಾಯ್ತಾ ಇರ್ತಾರೆ. ಎಲ್ಲಾದರೂ ಬಕ್ರಾ ಸಿಕ್ಕಿದರೆ ಅವತ್ತು ಅವರಿಗೆ ಭರ್ಜರಿ ಬೇಟೆ..!

ಹೀಗೆಯೇ ಸುತ್ತಾಡಿಕೊಂಡು ಮಂಗಳೂರಿನಿಂದ ಸುಳ್ಯಕ್ಕೆ ಬಂದಿರುವ ಇಬ್ಬರು ವ್ಯಕ್ತಿಗಳು ಸುಲಭವಾಗಿ ಹಣ ಸಂಗ್ರಹಕ್ಕೆ ಇಳಿದಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಪುತ್ತೂರಿನ ಅನಾರೋಗ್ಯ ಪೀಡಿತ ವ್ಯಕ್ತಿಯ ಫೋಟೋ ತೋರಿಸಿ ಜನರ ಜೊತೆ ಚಿಕಿತ್ಸೆಗೆ ಹಣ ಬೇಕೆಂದು ಮನವಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಹೀಗೆ ದೂರುವುದಕ್ಕೂ ಕಾರಣವಿದೆ. ಸುಳ್ಯದ ಮೀನು ವ್ಯಾಪಾರಿಯೊಬ್ಬರ ಹೆಸರು ಹೇಳಿಕೊಂಡು ಹಣವನ್ನು ಸಂಗ್ರಹಿಸುತ್ತಿದ್ದರು. ಆದರೆ ಆ ಮೀನು ವ್ಯಾಪಾರಿಗೆ ಈ ವಿಚಾರವೇ ಗೊತ್ತಿರಲಿಲ್ಲ. ಇದರಿಂದ ಅನುಮಾನ ಹೆಚ್ಚಾಗಿದೆ. ಮಾತ್ರವಲ್ಲ ಕಳೆದೊಂದು ವಾರದಿಂದ ಈ ರೀತಿಯಾಗಿ ಸುಳ್ಯ ನಗರದಲ್ಲಿ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.

ಕಷ್ಟದಲ್ಲಿ ಇರುವವರಿಗಾಗಿ ಸಾಮಾನ್ಯವಾಗಿ ಎಲ್ಲರೂ ಸಹಾಯ ಮಾಡುತ್ತಾರೆ. ಭಾವನಾತ್ಮಕ ವಿಚಾರಗಳಾಗಿರುವ ಕಾರಣಕ್ಕೆ ಅನೇಕರು ಹಣವನ್ನು ನೀಡುತ್ತಾರೆ. ಹೀಗೆ ಹಣವನ್ನು ಸಂಗ್ರಹಿಸುವಾಗ ಯಾವುದಾದರೊಂದು ದಾಖಲೆಗಳು ಕೂಡ ಬೇಕಾಗುತ್ತದೆ. ಆದರೆ ಇವರಲ್ಲಿ ಫೋಟೋ ಬಿಟ್ಟರೆ ಯಾವುದೇ ದಾಖಲೆಗಳಿರಲಿಲ್ಲ. ಅಲ್ಲದೆ ಹಣವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹಿಸುವಾಗ ನಗರ ಪಂಚಾಯತ್ ಅನುಮತಿ ಪತ್ರ ಕೂಡ ಬೇಕಾಗುತ್ತದೆ. ಆದರೆ ಅದ್ಯಾವುದೂ ಇವರ ಬಳಿ ಇರಲಿಲ್ಲ ಎನ್ನಲಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ನೀಡಿದ ದೂರಿನ ಪ್ರಕಾರ ಶನಿವಾರ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಹಣವನ್ನು ಒಬ್ಬರ ಜೀವ ಉಳಿಸುವ ಒಳ್ಳೆಯ ಕಾರ್ಯಕ್ಕಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಆಧಾರಗಳಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಣ ಸಂಗ್ರಹಿಸುವಂತಿಲ್ಲ. ಮೊದಲು ನೀವು ದಾಖಲೆಗಳನ್ನು ತೋರಿಸಿ ಎಂದು ಕೇಳಿದ್ದಾರೆ. ಇದಕ್ಕೆ ಅವರು ಫೋಟೋ ಬಿಟ್ಟರೆ ನಮ್ಮ ಬಳಿ ದಾಖಲೆಗಳಿಲ್ಲ ಅಂದಿದ್ದಾರೆ. ಇತ್ತ ಮೀನು ವ್ಯಾಪಾರಿಗೆ ಪೊಲೀಸರು ಫೋನ್ ಕರೆ ಮಾಡಿ ತಿಳಿಸಿದಾಗ ಅವರು ನಮಗೆ ಗೊತ್ತಿಲ್ಲ, ನನ್ನ ಹೆಸರು ಹೇಳಿಕೊಂಡು ಯಾರು ಕೂಡ ಹಣ ಸಂಗ್ರಹ ಮಾಡಬಾರದು ಎಂದು ತಿಳಿಸಿದ್ದಾರೆ. ಈ ವೇಳೆ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಗುತ್ತಿಗಾರಿನಲ್ಲಿ ವಿದ್ಯುತ್ ಸಬ್ ಸ್ಟೇಶನ್ ಗೆ ಸಚಿವ ಅಂಗಾರ ಪ್ರಾಯೋಗಿಕ ಚಾಲನೆ

ಸುಳ್ಯ: ಮೂವರು ಬಡ ಮಹಿಳೆಯರೇ ಇದ್ದ ಮನೆ ರಿಪೇರಿ ಕೆಲಸ ಪೂರ್ಣ,ವಾತ್ಸಲ್ಯ ಮನೆ ಯೋಜನೆ ಅಡಿಯಲ್ಲಿ ಹಳೆ ಮನೆಗೆ ಹೊಸ ಲುಕ್..!

ಸುಳ್ಯ: ಹಿಂದೂ ಯುವತಿಯ ಫೋಟೋ ತೆಗೆದ ಪ್ರಕರಣ, ಸೂಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದ ಶ್ರೀಕಾಂತ್ ಮಾವಿನಕಟ್ಟೆ