ನ್ಯೂಸ್ ನಾಟೌಟ್ : ಕಳೆದ ವರ್ಷ ನವೆಂಬರ್ 19ಕ್ಕೆ ನಡೆದ ಕುಕ್ಕರ್ ಬಾಂಬ್ ಸ್ಪೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸ್ಪೋಟಕ ಅಂಶಗಳು ಬೆಳಕಿಗೆ ಬಂದಿವೆ.ಶಂಕಿತ ಉಗ್ರ ಅರಾಫತ್ ಅಲಿ ಎನ್ ಐ ಎ ತನಿಖೆ ವೇಳೆ ತೀರ್ಥಹಳ್ಳಿ ಬ್ರದರ್ಸ್ ಟಾರ್ಗೆಟ್ ಹಾಕಿಕೊಂಡ ಕರ್ನಾಟಕದಲ್ಲಿ ಮೂರು ಸ್ಥಳಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಐಸಿಸ್ ಉಗ್ರರು ಮಂಗಳೂರು ಕದ್ರಿ ದೇವಸ್ಥಾನಕ್ಕೆ ಟಾರ್ಗೆಟ್ ಹಾಕಿಕೊಂಡಿರುವುದು ತನಿಖೆ ವೇಳೆ ಬಯಲಾಗಿತ್ತು. ಆದರೀಗ ಉಡುಪಿ ಮಠ ಉಗ್ರರ ಟಾರ್ಗೆಟ್ ಅಗಿತ್ತು ಅನ್ನುವ ಸ್ಫೋಟಕ ರಹಸ್ಯ ಬಯಲಾಗಿದೆ. ಉಡುಪಿ ಮಠದ ಜತೆಗೆ ಚಿಕ್ಕಮಗಳೂರು ಬಿಜೆಪಿ ಕಚೇರಿಯೂ ಟಾರ್ಗೆಟ್ ಹಾಕಿಕೊಂಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿ ಗಾಯಗೊಂಡಿದ್ದ ಮಹಮ್ಮದ್ ಶಾರಿಕ್ ವಿಚಾರಣೆಯ ವೇಳೆ ತಾನು ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದ. ಆ ದಿನ ಕದ್ರಿ ದೇವಸ್ಥಾನದ ಬಳಿ ಸ್ಫೋಟ ನಡೆಸುವ ಸಂಚು ಸಫಲವಾಗಿರುತ್ತಿದ್ದರೆ ಉಡುಪಿ ಮಠದಲ್ಲಿ ಬಾಂಬ್ ಇಡುವ ಸ್ಕೆಚ್ ನಡೆದಿತ್ತು .ಮಾತ್ರವಲ್ಲದೇ ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನು ಕೂಡಾ ಟಾರ್ಗೆಟ್ ಮಾಡಲಾಗಿತ್ತು. ಆದರೆ, ಕದ್ರಿ ದೇವಸ್ಥಾನದ ಟಾರ್ಗೆಟ್ ಮಿಸ್ ಆಗಿದ್ದರಿಂದ ಉಡುಪಿ ಮತ್ತು ಚಿಕ್ಕಮಗಳೂರು ಬಿಜೆಪಿ ಕಚೇರಿ ಟಾರ್ಗೆಟ್‌ಗಳು ಮುಂದೆ ಹೋಗಿವೆ ಎನ್ನಲಾಗಿದೆ.
ಶಿವಮೊಗ್ಗ ಟೆರರ್ ಬ್ರದರ್ಸ್ (Shivamogga Terror) ಎಂದೇ ಕರೆಯಲಾಗುವ ಮತೀನ್ ತಾಹಾ, ಮಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಮಹಮ್ಮದ್ ಯಾಸಿನ್ ಮತ್ತು ಇತ್ತೀಚೆಗೆ ದಿಲ್ಲಿಯಲ್ಲಿ ಸೆರೆ ಸಿಕ್ಕ ಅರಾಫತ್ ಅಲಿ ಮೊದಲಾದ ಶಂಕಿತ ಉಗ್ರರ ವಿಚಾರಣೆಯ ವೇಳೆ ಹಲವಾರು ಮಹತ್ವದ ವಿಚಾರಗಳು ಬಯಲಿಗೆ ಬಂದಿವೆ.
ಅದರಲ್ಲೂ ಮುಖ್ಯವಾಗಿ ಇತ್ತೀಚಿನವರೆಗೂ ಕೀನ್ಯಾದ ನೈರೋಬಿಯಲ್ಲಿದ್ದು, ಇತ್ತೀಚೆಗಷ್ಟೇ ದಿಲ್ಲಿ ಮೂಲಕ ದೇಶ ಪ್ರವೇಶಿಸಿದ ಅರಾಫತ್ ಅಲಿ ಹಲವು ಸಂಗತಿಗಳನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಆತ ಬಾಯಿ ಬಿಟ್ಟಿರುವ ಪ್ರಕಾರ ‘ಉಗ್ರರು ಕದ್ರಿ ದೇವಸ್ಥಾನ, ಉಡುಪಿ ಕೃಷ್ಣ ಮಠ ಮತ್ತು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಸಂಚು ನಡೆಸಿದ್ದರು. ಅದರ ಭಾಗವಾಗಿಯೇ 2022ರ ನವೆಂಬರ್ 19ರಂದು ಮಹಮ್ಮದ್ ಶಾರಿಕ್ ಕುಕ್ಕರ್ ಬಾಂಬ್‌ನ್ನು ಹಿಡಿದುಕೊಂಡು ದೇವಸ್ಥಾನದತ್ತ ಹೊರಟಿದ್ದ. ಆದರೆ, ಅದು ಮಂಗಳೂರಿನ ನಾಗುರಿ ಸಮೀಪ ರಿಕ್ಷಾದಲ್ಲಿ ಸಾಗುತ್ತಿದ್ದಾಗ ಸ್ಫೋಟಿಸಿದೆ ಎಂಬ ಮಾಹಿತಿ ಇದೀಗ ಬಯಲಾಗಿದೆ. ಈ ಘಟನೆಯಲ್ಲಿ ಶಾರಿಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಅವರು ಗಾಯಗೊಂಡಿದ್ದರು.