ನ್ಯೂಸ್ ನಾಟೌಟ್: ಯುಪಿಐ ಮೂಲಕ ವ್ಯಾಪಾರ-ವಹಿವಾಟು ನಡೆಸುತ್ತಿದ್ದ ಸಣ್ಣ ಪುಟ್ಟ ಅಂಗಡಿ ಮಾಲೀಕರಿಗೆ ವಾಣಿಜ್ಯ ಇಲಾಖೆ ತೆರಿಗೆ ನೋಟಿಸ್ ನೀಡಿದ ಬಳಿಕ ಅಂಗಡಿ ಮಾಲೀಕರು ಇದೀಗ ಯು.ಪಿ.ಐ. ಸ್ಕ್ಯಾನರ್ ಕಿತ್ತು ಹಾಕಿ ನೇರ ನಗದು ರೂಪದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದ್ದು, ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ. ವರ್ತಕರಿಂದ ಜಿ.ಎಸ್.ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆ ಸಂಗ್ರಹಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಸರಕುಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ನಗದು ರೂಪದಲ್ಲಾಗಲೀ, ಯು.ಪಿ.ಐ., ಪಿ.ಒ.ಎಸ್. ಮೆಷಿನ್, ಬ್ಯಾಂಕ್ ಖಾತೆ ಹಾಗೂ ಇತರ ಯಾವುದೇ ವಿಧಾನಗಳಿಂದ 40 ಲಕ್ಷ ರೂ. ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರೂ. ಮೀರಿದರೆ ಅಂತಹ ವರ್ತಕರು ಜಿ.ಎಸ್.ಟಿ. ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.
ವ್ಯಾಪಾರಿಗಳು ಏನು ಮಾಡಬಹುದು..?
ಯಾವುದೇ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇದ್ದಲ್ಲಿ ಜಿ.ಎಸ್.ಟಿ. ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡು ವಹಿವಾಟಿನ ಮೇಲೆ ಶೇ.0.5 ಎಸ್‌ಜಿಎಸ್‌ಟಿ ಮತ್ತು ಶೇ.0.5 ಸಿಜಿಎಸ್‌ಟಿ ತೆರಿಗೆ ಪಾವತಿಸಬಹುದು. ಆದರೆ ನೋಂದಣಿ ಪಡೆಯದೆ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ವರ್ತಕರು ಯಾವುದೇ ಗೊಂದಲಕ್ಕೆ ಒಳಗಾಗದೆ ನೋಟಿಸ್ ಬಂದಿರುವ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ ಅಧಿಕಾರಿಗಳು ಪರಿಶೀಲಿಸಿ, ಅವರಿಗೆ ಜಿ.ಎಸ್.ಟಿ. ಸಂಬಂಧಿಸಿದ ನಿಯಮಗಳು ಮತ್ತು ಅದಕ್ಕೆ ಪರಿಹಾರಗಳು ತಿಳಿಸುತ್ತಾರೆ ಎಂದು ಇಲಾಖೆ ತಿಳಿಸಿದೆ. ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳು ಸೇರಿರುತ್ತವೆ. ವರ್ತಕರು ಜಿ.ಎಸ್.ಟಿ. ಅಡಿಯಲ್ಲಿ ಸಾಮಾನ್ಯ ನೋಂದಣಿ ಪಡೆದಿದ್ದೇ ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾನು ಖರೀದಿಸಿದ ವಸ್ತುಗಳ ಮೇಲೆ ಹೂಡುವಳಿ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿವ್ವಳ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ.
ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿರುತ್ತಾರೆ. ಈಗಾಗಲೇ ವಾರ್ಷಿಕ ವಹಿವಾಟು ರೂ. 40 ಲಕ್ಷಗಳು (ಸರಕುಗಳ ಪೂರೈಕೆದಾರರು), 20 ಲಕ್ಷಗಳು (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೆ ಇರುವ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಂದಾಯಿತ ವರ್ತಕರು ಇನ್ನು ಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು ಎಂದು ಇಲಾಖೆ ತಿಳಿಸಿದೆ.