ನ್ಯೂಸ್ ನಾಟೌಟ್: ಮೂರು ವರ್ಷಗಳ ಹಿಂದೆ ಬಸ್ಸಿನಲ್ಲಿ ಓಡಾಡೋ ಹೊತ್ತಿಗೆ ಮಹಿಳೆಯರಿಗೆ ಸೀಟಿಗಾಗಿ ಯಾವುದೇ ಚಿಂತೆ ಇರಲಿಲ್ಲ.ಬಸ್ ಡ್ರೈವರ್ ಹಿಂದೆ ಇರೋ ಮೂರು ಸೀಟುಗಳು ಮಹಿಳೆಯರಿಗೆ ಮೀಸಲಾಗಿರುತ್ತಿತ್ತು. ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟಿರುವ ಸೀಟುಗಳನ್ನು ಅವರಿಗೇ ಬಿಟ್ಟುಕೊಡಿ. ಮಹಿಳೆಯರಿಗೆ ಮೀಸಲಾತಿರುವ ಆಸನದಲ್ಲಿ ಕುಳಿತು ಪ್ರಯಾಣಿಸಿದರೆ ದಂಡ ವಿಧಿಸಲಾಗುವುದು’’, ಇತ್ಯಾದಿ ಸಂದೇಶಗಳನ್ನು ಹಿಂದೆ ನಾವು ಬಸ್ಸುಗಳಲ್ಲಿ ಓದಿರುತ್ತೇವೆ. ಆದರೆ ಈಗ ಅದೆಲ್ಲವೂ ಬದಲಾಗಿದೆ.
ಹೌದು,ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ. ಇದೀಗ ಪುರುಷರಿಗೆ ಸೀಟು ಬಿಟ್ಟುಕೊಡಿ ಎಂದು ಹೇಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಷ್ಟೇ ಏಕೆ, ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗ ಅಧಿಕೃತ ಆದೇಶವನ್ನೂ ಹೊರಡಿಸಿದೆ!
ಮಹಿಳೆಯರಿಗೆ ಫ್ರೀ ಆದ ಕಾರಣ , ಮಹಿಳಾ ಪ್ರಯಾಣಿಕರೇ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಬಸ್ ನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುಗಳನ್ನು ಅವರಿಗೆ ಬಿಟ್ಟುಕೊಡಬೇಕು. ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಎಸ್ಆರ್ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ಆದೇಶ ಹೊರಡಿಸಿರುವುದು ಈಗ ಬೆಳಕಿಗೆ ಬಂದಿದೆ.ಈ ವಿಚಾರದಲ್ಲಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿರೋದು ಇದೇ ಮೊದಲಾಗಿದೆ.