ನ್ಯೂಸ್ ನಾಟೌಟ್: ಕೊಡಗು ಭಾಗದಲ್ಲಿ ಮಳೆ ಬಂದರೆ ಸಾಕು. ಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಯಾವಾಗ ಬೆಟ್ಟ ಜರಿಯುವುದೋ ಎಲ್ಲಿ ಗುಡ್ಡ ಬೀಳುತ್ತೋ ಅನ್ನೋ ಆತಂಕ ಅಲ್ಲಿನವರನ್ನು ಕಾಡುತ್ತೆ. ಸಾಮಾನ್ಯವಾಗಿ ಮಡಿಕೇರಿಯಿಂದ ಸಂಪಾಜೆವರೆಗೆ 21 ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಇರುವ ಗುಡ್ಡಗಳು ಕುಸಿತ್ತಲೇ ಇದ್ದವು. ಇದನ್ನು ಮನಗಂಡ ಅಂದಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಲ್ಲೆಲ್ಲಿ ರಸ್ತೆ ಕುಸಿತ ಅಥವಾ ರಸ್ತೆಯ ಮೇಲೆ ಗುಡ್ಡ ಕುಸಿತಗಳು ನಡೆಯುತ್ತವೆಯೋ ಅಲ್ಲೆಲ್ಲಾ ಹೆದ್ದಾರಿಗೆ ತಡೆಗೋಡೆ ನಿರ್ಮಿಸುವುದಕ್ಕೆ ಯೋಜನೆ ರೂಪಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 21 ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವುದಕ್ಕೆ ಅನುಮೋದನೆ ನೀಡಿದೆ.
ಮಳೆಗಾಲದಲ್ಲಿ ಭೂಕುಸಿತದ ಅಪಾಯವಿರುವ 21 ಕಡೆಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಎಂಜಿನಿಯರಿಂಗ್ ವಿಭಾಗದ ಕೋರಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅಲ್ಲದೆ 94 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ ಅನುಮೋದನೆ ನೀಡಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಶುರುವಾಗಿದ್ದು, ಟೆಂಡರ್ ಮುಗಿಯುತ್ತಿದ್ದಂತೆ ಕಾಮಗಾರಿ ನಡೆಯಲಿದೆ. ನಿರೀಕ್ಷೆಯಂತೆ ಕಾಮಗಾರಿ ನಡೆದರೆ ಪ್ರತೀ ವರ್ಷದ ಮಳೆಗಾಲದಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗಿನ ರಸ್ತೆ ಸಂಚಾರಕ್ಕೆ ಎದುರಾಗುತ್ತಿದ್ದ ಸಂಚಾಕಾರ ದೂರವಾಗಲಿದೆ. ಮಡಿಕೇರಿಯ ಸಂಪಿಗೆ ಕಟ್ಟೆಯಿಂದ ಶುರುವಾಗಿ ಕೆಲವು ಕಡೆಗಳಲ್ಲಿ ಕಿರಿದಾದ ಹೆದ್ದಾರಿಯನ್ನು ವಿಸ್ತರಣೆ ಮಾಡುವುದು ಹಾಗೂ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಆಗಲಿದೆ. ಇದು ಕೊಡಗಿನ ಜನತೆಗೆ ಅದರಲ್ಲೂ ಮಡಿಕೇರಿಯಿಂದ ಸಂಪಾಜೆವರೆಗೆ ಇರುವ ಹತ್ತಾರು ಗ್ರಾಮಗಳ ಸಾವಿರಾರು ಜನರಿಗೆ ತುಂಬಾ ಅನುಕೂಲ ಆಗಲಿದೆ.
ಸ್ಥಳೀಯರೊಬ್ಬರು ಮಾತನಾಡಿ 2018 ರಲ್ಲಿ ಮೊದಲ ಬಾರಿಗೆ ಎದುರಾದ ಭೂಕುಸಿತದ ಸಂದರ್ಭದಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಹಲವಾರು ಕಡೆಗಳಲ್ಲಿ ರಸ್ತೆಯೇ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿತ್ತು. ಅದಾದ ಬಳಿಕವೂ ಪ್ರತೀ ವರ್ಷ ಹೆದ್ದಾರಿ ಕುಸಿಯುವುದು ಮತ್ತು ಹೆದ್ದಾರಿ ಮೇಲೆ ಬೆಟ್ಟ ಕುಸಿಯುವುದು ಸರ್ವೇ ಸಾಮಾನ್ಯವಾಗಿ ಹೋಗಿತ್ತು. ಇದರಿಂದ ಸಾವಿರಾರು ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದರು. ಸ್ಥಳೀಯ ಜನರಲ್ಲದೆ ಮಡಿಕೇರಿ ಸಂಪಾಜೆ ಮಾರ್ಗವಾಗಿ ಮಂಗಳೂರು, ಉಡುಪಿ ಅಥವಾ ಉತ್ತರ ಕನ್ನಡ ಜಿಲ್ಲೆಗಳಿಗೆ ಹೋಗಬೇಕಾದ ಸಾವಿರಾರು ವಾಹನಗಳ ಸವಾರರು ಪರದಾಡುತ್ತಿದ್ದರು. ಅದರಲ್ಲೂ ಯಾರಾದರೂ ತುರ್ತು ಚಿಕಿತ್ಸೆ ಪಡೆಯಲು ಈ ಮಾರ್ಗದ ಮೂಲಕ ಮಂಗಳೂರು ಭಾಗಕ್ಕೆ ಹೋಗಬೇಕೆಂದರೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಹೆದ್ದಾರಿ ಕುಸಿಯುವ ಅಥವಾ ಹೆದ್ದಾರಿ ಮೇಲೆ ಬೆಟ್ಟ ಕುಸಿಯುವಂತಹ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿರುವುದು ಒಳ್ಳೆಯ ವಿಚಾರ. ಆದಷ್ಟು ಶೀಘ್ರವೇ ಕಾಮಗಾರಿ ಆಗಲಿ ಎಂದು ಆಗ್ರಹಿಸಿದ್ದಾರೆ.
ಇನ್ನು ಹೆದ್ದಾರಿಗೆ ತಡೆಗೋಡೆ ನಿರ್ಮಿಸಲು ಅನುಮೋದನೆ ದೊರೆತಿರುವುದು ಒಳ್ಳೆಯ ವಿಚಾರ. ಹಿಂದೆಯೇ ಅಧಿಕಾರಿಗಳು ಈ ಕಾಮಗಾರಿಗೆ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿದ್ದರು, ಇದೀಗ ನಮ್ಮ ಸಂಸದರು ತಮ್ಮ ಪರಿಶ್ರಮದಿಂದ ಈ ಕಾಮಗಾರಿಗೆ ಅನುಮೋದನೆ ಕೊಡಿಸಿರುವುದು ಒಳ್ಳೆಯ ವಿಚಾರ ಎಂದಿದ್ದಾರೆ.