Uncategorized

Chamarajeshwara Temple: ‘ಹಾಯ್‌ ಪುಟ್ಟಾ…ಹೇಗಿದಿಯಾ..? ನಿನ್ನ ನೆನಪೇ ಕಾಡುತ್ತಿದೆ’, ದೂರವಾದ ಜೀವದ ಗೆಳತಿಗೆ ಪತ್ರ ಬರೆದು ದೇವರ ಹುಂಡಿಗೆ ಹಾಕಿದ ಪ್ರೇಮಿ..!

ನ್ಯೂಸ್ ನಾಟೌಟ್: ಪ್ರೀತಿ ಪ್ರೇಮದ ಬಲೆಗೆ ಬಿದ್ದವರೆಲ್ಲರ ಜೀವನವೂ ಮದುವೆಯಲ್ಲಿ ಅಂತ್ಯವಾಗುವುದಿಲ್ಲ. ಬಹುತೇಕರ ಜೀವನ ದುರಂತ ಕಥೆಯಲ್ಲಿಯೇ ಅಂತ್ಯವಾಗುತ್ತದೆ. ಹುಡುಗಿಯರು ಕೈಕೊಟ್ಟು ನಾನಾ ರೀತಿಯಲ್ಲಿ ಅಲೆದಾಡುವ ಹುಡುಗರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರಿಯತಮೆಗೆ ಪತ್ರ ಬರೆದು ಅದನ್ನು ದೇವರ ಹುಂಡಿಗೆ ಹಾಕಿದ್ದಾನೆ. ದೇವರ ಚಿಲ್ಲರೆ ಡಬ್ಬಿಯೊಳಗಿದ್ದ ಈತನ ಪತ್ರ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಚಾಮರಾಜ ನಗರದ ಚಾಮರಾಜೇಶ್ವರ (Chamarajeshwara Temple) ದೇವಸ್ಥಾನದಲ್ಲಿ. ಇಲ್ಲಿನ ಹುಂಡಿ ಎಣಿಕೆ ಸಂದರ್ಭದಲ್ಲಿ ಪ್ರೇಮ ಪತ್ರ ಸಿಕ್ಕಿದೆ.

ಹಾಯ್ ಪುಟ್ಟಾ, ಹೇಗಿದ್ದೀಯಾ. ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ ಅನ್ಕೊಂಡಿದೀವಿ, ನೀನು ಹೀಗೆಲ್ಲ ಮಾಡಬಾರದಿತ್ತು…ಎಂದು ಪತ್ರದ ಪೀಠಿಕೆ ಆರಂಭವಾಗಿತ್ತು. ಅವರಿಬ್ಬರ ಸಂಬಂಧ, ಆಕೆ ಎಂದರೆ ಅವನಿಗೆಷ್ಟು ಇಷ್ಟ, ಆಕೆ ಇಲ್ಲದ ಬದುಕು ಈಗ ಎಷ್ಟು ನೋವಿನಲ್ಲಿದೆ. ಖುಷಿಯನ್ನು, ದುಃಖವನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎನ್ನುವ ಅನಾಥ ಭಾವ ಕೂಡ ಪತ್ರದಲ್ಲಿ ದಾಖಲಾಗಿತ್ತು.

ಎರಡು ತಿಂಗಳ ಹಿಂದೆ ಆ ಹುಡುಗಿಗೆ ಮದುವೆಯಾಗಿದೆ. ಮದುವೆಯಾಗಿದೆ ಅಂದರೆ ಆಕೆ ತಾನು ಮೆಚ್ಚಿದ ಇನ್ನೊಬ್ಬ ಹುಡುಗನ ಜತೆಗೆ ಮನೆಯವರಿಗೂ ಹೇಳದೆ ಓಡಿ ಹೋಗಿದ್ದಾಳೆ. ಈಗ ಅವಳು ಇವನ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಈ ವೇದನೆಯಿಂದ ಆತ ದೇವರಿಗೆ ಪತ್ರ ಬರೆದಿದ್ದಾನೆ. ನಿನ್ನನೊಮ್ಮೆ ನೋಡಬೇಕು, ನಿನ್ನಲೊಮ್ಮೆ ಮಾತನಾಡಬೇಕು, ನನ್ನ ಮನಸಿನ ಭಾವನೆ ಹೇಳಿಕೊಳ್ಳಬೇಕು ಎನ್ನುವುದು ಅವನ ಆಸೆ. ನಿನ್ನನ್ನು ಮಿಸ್‌ ಮಾಡ್ಕೊತೀನಿ ಅಂತ ಪದೇಪದೆ ಹೇಳುತ್ತಾನೆ. ನೀನು ನನ್ನ ಮಿಸ್‌ ಮಾಡ್ಕೊತಿದಿಯಾ ಅಂತ ಕೇಳ್ತಾನೆ.

ಆಕೆ ಓಡಿ ಹೋದ ಮೇಲೆ ಆತನಿಗೆ ಆ ಹುಡುಗಿಯ ಮೇಲಿದ್ದ ಪ್ರೀತಿಯ ಭಾವನೆ ಜಾಗೃತವಾಗಿದೆ ಅನಿಸುತ್ತದೆ. ʻಎಲ್ಲರೂ ಬಿಟ್ಟು ಹೋದ ಮೇಲೂ ನಾವಿಬ್ಬರು ಜತೆಯಾಗಿರಬೇಕುʼ ಅಂತ ಅವರು ಹಿಂದೆಲ್ಲ ಮಾತನಾಡಿಕೊಂಡಿದ್ದರು. ಆದರೆ, ಪ್ರೀತಿ ಮಾಡಬೇಕು, ಮದುವೆಯಾಗಬೇಕು ಅಂತ ಹೇಳಿಕೊಂಡಂತಿಲ್ಲ. ಹೀಗಾಗಿ ಪತ್ರದ ಆರಂಭದಲ್ಲಿ ಗೆಳತಿಗೊಂದು ಪತ್ರ, ಬೆಸ್ಟ್‌ ಫ್ರೆಂಡ್‌ಗೊಂದು ಪತ್ರ ಅನ್ನುವ ರೀತಿಯಲ್ಲೇ ಇದೆ.

ಈ ಪತ್ರ ಬರೆದ ಯುವಕನಿಗೆ ಒಂದು ಸಣ್ಣ ಸಂಶಯ. ʻʻನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆʼʼ ಎಂದು ಪತ್ರದಲ್ಲಿ ಬರೆದಿದ್ದಾನೆ. ಅಂದರೆ ಆಕೆ ಪ್ರೀತಿ ಮಾಡುತ್ತಿದ್ದ ವಿಷಯ ಇವನಿಗೆ ಗೊತ್ತಿರಲೇ ಇಲ್ಲ. ಈಗಲೂ ಆಕೆ ನಿಜವಾಗಿ ಪ್ರೀತಿಸಿಯೇ ಓಡಿ ಹೋದಳಾ ಅಥವಾ ಅವನೇನಾದರೂ ಬ್ಲ್ಯಾಕ್‌ಮೇಲ್‌ ಮಾಡಿ ಆಕೆಯನ್ನು ಹೆದರಿಸಿ ಓಡಿಸಿಕೊಂಡು ಹೋಗಿ ಮದುವೆಯಾದನಾ ಎನ್ನುವ ಬಗ್ಗೆ ಅವನಿಗೆ ಸಣ್ಣ ಸಂಶಯ. ಹೀಗಾಗಿ ಆತ ಆಕೆಯಲ್ಲೊಮ್ಮೆ ಮಾತನಾಡಬೇಕು. ಆಕೆ ಕಷ್ಟದಲ್ಲಿದ್ದಾಳಾ ಎಂದು ತಿಳಿಯಬೇಕು ಎನ್ನುವ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ.

Related posts

ಬೆಂಗಳೂರಿನಲ್ಲಿಯೂ ಮೊಳಗಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಹಳೆ

ಕೇರಳದಲ್ಲಿ ಬಾಂಬ್‌ ಸ್ಪೋಟ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲು, ಸಚಿವರ ವಿರುದ್ಧ ಕೇರಳ ಪೊಲೀಸರು ದೂರು ದಾಖಲಿಸಿದ್ದೇಕೆ..?

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಗೋಮಾಂಸ ಮುಕ್ತ ವ್ಯಾಪಾರಕ್ಕೆ ಅವಕಾಶ