ಮಂಗಳೂರು: ಕೇರಳದಲ್ಲಿ ಕೊರೊನಾ ಹಾಗೂ ನಿಫಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವುದನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ತೆರಳುವುದಕ್ಕೆ ನಿಷೇಧ ಹೇರಲಾಗಿದೆ. ಒಟ್ಟು ಎರಡು ತಿಂಗಳುಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದು ಸ್ವತಃ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ. ಕೇರಳದ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಹೆಚ್ಚಿನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಇಲ್ಲಿಂದ ಅಲ್ಲಿಗೆ ಸದ್ಯ ತೆರಳುವಂತಿಲ್ಲ ಅಥವಾ ರಜೆ ಮೇಲೆ ಅಲ್ಲಿಗೆ ಹೋಗಿದ್ದವರು ಇಲ್ಲಿಗೆ ಬರುವಂತಿಲ್ಲ. ಈ ವಿಚಾರವನ್ನು ಕಡ್ಡಾಯವಾಗಿ ಆಯಾ ಶಿಕ್ಷಣ ಸಂಸ್ಥೆಗಳು ತಿಳಿಸಬೇಕು ಎಂದು ಸೂಚಿಸಲಾಗಿದೆ.