ಕರಾವಳಿ

ಅನಾಥ ಮಕ್ಕಳನ್ನು ಪ್ರವಾಸಕ್ಕೆ ಕರೆಯೊಯ್ದ ದ.ಕ ಜಿಲ್ಲಾಧಿಕಾರಿ

ನ್ಯೂಸ್ ನಾಟೌಟ್: ಅಧಿಕಾರಿಗಳು ಮನಸ್ಸು ಮಾಡಿದರೆ ಸಮಾಜದಲ್ಲಿ ಅದ್ಭುತವನ್ನೇ ಸೃಷ್ಟಿಸಬಹುದು ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉತ್ತಮ ಉದಾಹರಣೆ. ಸರಕಾರಿ ಅಧಿಕಾರಿಗಳೆಂದರೆ ಸಾಮಾನ್ಯವಾಗಿ ಮೊದಲಾಗಿ ಕಾಣಿಸಿಕೊಳ್ಳುವುದು ಸೀಟಿನಲ್ಲಿ ಗಂಟು ಮುಖ ಹಾಕಿಕೊಂಡು ಚಿತ್ರಣ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವರೆಲ್ಲರಿಗಿಂತ ವಿಶೇಷ ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ.

ಹೌದು , ಅನಾಥ ಮಕ್ಕಳನ್ನು ಒಂದು ದಿನ ಪ್ರವಾಸಕ್ಕೆ ಕರೆದೊಯ್ದು ಸುದ್ದಿಯಾಗಿದ್ದಾರೆ. ಮಕ್ಕಳಿಗೆ ತಿಂಡಿ, ಊಟ, ಮನೋರಂಜನೆ ನೀಡಿ ಅವರೊಂದಿಗೆ ಮಕ್ಕಳಂತೆಯೇ ಬೆರೆತು ಸುದ್ದಿಯಾಗಿದ್ದಾರೆ. ಪ್ರತಿಯೊಬ್ಬ ಮಗುವಿಗೆ ಅಪ್ಪ-ಅಮ್ಮನ ಜತೆಗೆ ತಿರುಗಾಡಬೇಕು, ಐಸ್ ಕ್ರೀಂ , ಬಟ್ಟೆ ತೆಗೆದುಕೊಂಡು ಸಂಭ್ರಮಿಸಬೇಕು ಅನ್ನುವ ಆಸೆ ಇರುತ್ತದೆ. ಆದರೆ ಮಂಗಳೂರಿನ ಬೋದೇಲ್ ನಲ್ಲಿರುವ ಬಾಲಕರ ಬಾಲ ಮಂದಿರದಲ್ಲಿ ರಾಜ್ಯದ ವಿವಿಧ ಭಾಗದ ಅನಾಥ ಮಕ್ಕಳಿದ್ದಾರೆ. ಎಲ್ಲ ಮಕ್ಕಳಂತೆ ಇವರಿಗೂ ರಜೆಯ ದಿನಗಳು ಸುಂದರವಾಗಿರಬೇಕು ಅನ್ನುವ ಕಾರಣಕ್ಕೆ ಮಕ್ಕಳ ಮನರಂಜನೆಗಾಗಿ ಪ್ರವಾಸ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಕೇಳಲಾಗಿತ್ತು.

ಅನುಮತಿ ಕೇಳಲು ಹೋಗಿದ್ದವರಿಗೆ ಒಂದು ರೀತಿಯ ಅಚ್ಚರಿ. ಏಕೆಂದರೆ ಯಾರನ್ನು ಅನುಮತಿ ಕೇಳಲಾಗಿತ್ತೋ ಅವರು ನಾನು ಬರ್ತೀನಿ ಎಂದು ಸಂಬಂಧಪಟ್ಟವರಿಗೆ ತಿಳಿಸಿದರು. ಅದರಂತೆ ಮಕ್ಕಳ ಪ್ರವಾಸದಲ್ಲಿ ಜತೆಯಾದ ಜಿಲ್ಲಾಧಿಕಾರಿಗಳು ಪ್ರವಾಸಕ್ಕೆ ಅಗತ್ಯವಿದ್ದ ವಾಹನದ ವ್ಯವಸ್ಥೆ, ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಅಲ್ಲದೇ ಇಡೀ ದಿನ ಮಕ್ಕಳೊಂದಿಗೆ ಬೆರೆತ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಕ್ಕಳೊಂದಿಗೆ ಮಾತನಾಡಿ, ಅವರ ಪ್ರವಾಸದ ಅನುಭವಗಳನ್ನು ಆಲಿಸಿದರು. ಮಕ್ಕಳೂ ಜಿಲ್ಲಾಧಿಕಾರಿಯವರೊಂದಿಗೆ ಸ್ನೇಹಿತರ ರೀತಿ ಬೆರೆತಿದ್ದಾರೆ. ತಮ್ಮ ಬಳಿ ಇರೋದು ಜಿಲ್ಲಾಧಿಕಾರಿ ಎಂಬ ಅರಿವಿಲ್ಲದ ಮಕ್ಕಳು ಜಿಲ್ಲಾಧಿಕಾರಿಯೊಂದಿಗೆ ಹರಟೆ, ಕಾಮಿಡಿ, ಆಟ, ಊಟವನ್ನು ಮಾಡಿ ಸಂಭ್ರಮಿಸಿದ್ದಾರೆ. ಪಿಲಿಕುಳದ ಜೈವಿಕ ಉದ್ಯಾನವನ ಸುತ್ತಾಡಿದ್ದು ಮಾತ್ರವಲ್ಲದೇ ಅಲ್ಲಿಯದ್ದೇ ಮಾನಸ ವಾಟರ್ ಪಾರ್ಕ್ ನಲ್ಲಿ ಮನಸೋ ಇಚ್ಛೆ ನೀರಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

Related posts

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವಕ್ಕೆ ದಿನಗಣನೆ, ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಸಿದ್ಧತೆ

ಹಿರಿಯ ಸಾಹಿತಿ ಬೈರಪ್ಪ, ಮಾಜಿ ಸಿಎಂ ಎಸ್‌. ಎಂ. ಕೃಷ್ಣ, ಸುಧಾಮೂರ್ತಿಗೆ ಪದ್ಮಪ್ರಶಸ್ತಿ

ಬಿಜೆಪಿ ಟಿಕೆಟ್ ವಂಚಿತ ರಘುಪತಿ ಭಟ್ ಪರ ಮಾತನಾಡಿದ ಪ್ರತಾಪ್ ಸಿಂಹ..! ಹಿಂದುತ್ವವಾದಿಗಳ ಪರ ಪಕ್ಷ ನಿಲ್ಲುತ್ತಿಲ್ಲ ಎಂದ ಸಂಸದ..!