ಕರಾವಳಿಕೊಡಗು

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ – ಶಾಲಾ ಕಾಲೇಜುಗಳಿಗೆ ನಾಳೆಯೂ(25.07) ರಜೆ ಘೋಷಣೆ

ನ್ಯೂಸ್ ನಾಟೌಟ್ : ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ವಿಪರೀತ ಮಳೆಯಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಿಗೆ(ಪದವಿ ಮತ್ತು ಸ್ನಾತಕೋತ್ತರ ಹೊರತುಪಡಿಸಿ) ನಾಳೆಯೂ (25-07-2023) ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿದ್ದಾರೆ.

ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಅಲ್ಲಲ್ಲಿ ಸೇತುವೆ ಸೇರಿದಂತೆ ಗುಡ್ಡ ಕುಸಿದು ಹಾನಿಯಾಗುತ್ತಿರುವ ಬಗ್ಗೆಯೂ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮುಂಗಾರು ಬಿರುಸುಗೊಳ್ಳುತ್ತಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹದಿಂದಾಗಿ ರಸ್ತೆ ಮತ್ತು ಸೇತುವೆ ಸಂಪರ್ಕ ಕಡಿತಗೊಂಡಿದೆ.

ಕೊಡಗಿನ ಹಲವೆಡೆ ಮರ, ಬರೆ, ವಿದ್ಯುತ್ ಕಂಬಗಳು ಬೀಳುತ್ತಲೇ ಇದ್ದು,ರಸ್ತೆ ಮತ್ತು ಕಾಲು ಸೇತುವೆಗಳು ಕೊಚ್ಚಿ ಹೋದ ಘಟನೆ ಕೂಡ ನಡೆದಿದೆ. ಇಲ್ಲಿನ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳು ಭಯದ ವಾತಾವರಣದಲ್ಲಿದ್ದು,ಈಗಾಗಲೇ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಇನ್ನು ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೂ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ.ನಾಪೋಕ್ಲು ಅಯ್ಯಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನಷ್ಟ ಸಂಭವಿಸಿದೆ. ಇತ್ತ ವಿರಾಜಪೇಟೆ ತಾಲೂಕಿನ ಭೇತ್ರಿ ಬಳಿ ಕಾವೇರಿ ನದಿಯ ನೀರು ಸೇತುವೆ ಮಟ್ಟಕ್ಕೆ ಬಂದಿದೆ.

ದಕ್ಷಿಣ ಕೊಡಗಿನ ಶ್ರೀಮಂಗಲ, ಬಲ್ಯಮಂಡೂರು, ಹರಿಹರ, ಕಾನೂರು, ನಿಟ್ಟೂರು, ಬಾಳೆಲೆ ಭಾಗದಲ್ಲಿ ಲಕ್ಷ್ಮಣತೀರ್ಥ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ನೂರಾರು ಎಕರೆ ಗದ್ದೆಗಳು ಜಲಾವೃತವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ನಾಟಿ ಮಾಡಿದ ಗದ್ದೆಗಳು ಪ್ರವಾಹಕ್ಕೆ ಸಿಲುಕಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿ ನೀರು ಅಕ್ಕಪಕ್ಕದ ಕಾಫಿ ತೋಟಕ್ಕೂ ನುಗ್ಗಿದೆ. ಕೆರೆ ಹೊಳೆಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.ಈ ಹಿನ್ನಲೆಯಲ್ಲಿ ನಾಳೆಯೂ ರಜೆ ಘೋಷಿಸಲಾಗಿದೆ.

Related posts

ಮಡಿಕೇರಿ: ರಾಜಾ ಸೀಟ್‌ ನಲ್ಲಿ ಚಿಪ್ಸ್‌ಗಾಗಿ ಮಾರಾಮಾರಿ, ಓರ್ವನ ತಲೆಗೆ ಗಂಭೀರ ಗಾಯ!

ಸುಳ್ಯ: 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮೆ/ ಮುಳಿಯ ಕೃಷ್ಣ ಭಟ್‌ ಸನ್ಸ್‌, ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾದ ಸಂಸ್ಥೆ

ಭಾರತೀಯ ಸೇನೆಯ ಉನ್ನತ ಹುದ್ದೆಗೇರಿದ ಮತ್ತೋರ್ವ ಕೊಡಗಿನ ವೀರ, ಲೆಫ್ಟಿನೆಂಟ್ ಪದವಿಗೇರಿದ ಯುವಕ ಯಾರು..?