ನ್ಯೂಸ್ ನಾಟೌಟ್: ಚಂದ್ರಯಾನ 3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವ ಕ್ಷಣಕ್ಕಾಗಿ ದೇಶದ ಪ್ರಜೆಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಕಾರಣ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಹೀಗಾಗಿ ಅಲ್ಲಿಂದಲೇ ದೇಶವಾಸಿಗಳ ಜೊತೆ ವರ್ಚುವಲ್ ರೀತಿಯಲ್ಲಿ ಚಂದ್ರಯಾನ-3 ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
‘ಭಾರತೀಯರಿಗೆ ಶುಭವಾಗಲಿ’ ಎಂದು ಹೇಳುವ ಮೂಲಕ ಭಾರತೀಯ-ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಚಂದ್ರಯಾನ-3 ಮಿಷನ್’ನ ಲ್ಯಾಂಡರ್ ಮಾಡ್ಯೂಲ್ ಸಾಫ್ಟ್ ಲ್ಯಾಂಡಿಂಗ್’ಗೆ ಶುಭಹಾರೈಸಿದ್ದಾರೆ. “ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲ್ಮೈ ಮುಟ್ಟುವುದನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಅದೃಷ್ಟವಂತರು ನಾವು” ಎಂದು ಅನುಭವಿ ನಾಸಾ ಗಗನಯಾತ್ರಿ ನ್ಯಾಷನಲ್ ಜಿಯಾಗ್ರಫಿಕ್ ಇಂಡಿಯಾ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಐತಿಹಾಸಿಕ ಕ್ಷಣಕ್ಕೆ ಗಣ್ಯಾತಿಗಣ್ಯರು ಶುಭಕೋರಿದ್ದಾರೆ. ಅವರಲ್ಲಿ ಒಬ್ಬರಾದ ಭಾರತದ ಪ್ರಥಮ ಅಂತರಿಕ್ಷಯಾನಿ ರಾಕೇಶ್ ಶರ್ಮಾ, “ಚಂದ್ರಯಾನ 3 ಸುರಕ್ಷಿತ ಲ್ಯಾಂಡಿಂಗ್ ಆಗುವುದು ಖಂಡಿತ ಎಂದು ಹೆಮ್ಮೆಯಿಂದ ಹೇಳುವೆ” ಎಂದು ಹೇಳಿದ್ದಾರೆ.
ಚಂದ್ರಯಾನ -3 ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದೇವೆ. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಲೈವ್ ಆರಂಭವಾಗಲಿದೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ 3ನೇ ಚಂದ್ರನ ಮಿಷನ್ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಇಂದು ಸಂಜೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲು ಸಿದ್ಧವಾಗಿದೆ. ಇದರಲ್ಲಿ ಯಶಸ್ವಿಯಾದರೆ ಯುಎಸ್, ಚೀನಾ ಮತ್ತು ಸೋವಿಯತ್ ಒಕ್ಕೂಟದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿಲಿದೆ. ಇನ್ನೊಂದೆಡೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದಲ್ಲಿ ನೌಕೆ ಇಳಿಸುವ ಮೊದಲ ದೇಶ ಎನ್ನುವ ಹೆಗ್ಗಳಿಕೆ ಭಾರತ ಪಾತ್ರವಾಗಲಿದೆ.