ನ್ಯೂಸ್ ನಾಟೌಟ್: ಬೇಸಿಗೆ ಕಾಲ ಸ್ವಲ್ಪ ಫ್ರೆಶ್ ಗಾಳಿ ಬರ್ಲಿ ಎಂದು ಬಾಗಿಲು ಓಪನ್ ಮಾಡಿಟ್ಟರೆ ಸೊಳ್ಳೆಗಳ ಕಾಟ ಎಂದು ಸಾಮಾನ್ಯವಾಗಿ ಜನ ಮಾತನಾಡೋದನ್ನ ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಬಾಗಿಲು ಓಪನ್ ಮಾಡಿಟ್ಟ ಮನೆಗೆ ಚಿರತೆಯೇ ನುಗ್ಗಿದೆ. ಹೌದು,12 ವರ್ಷದ ಬಾಲಕನೋರ್ವ ಮೊಬೈಲ್ ನೋಡುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಏಕಾಏಕಿ ಮನೆಯೊಳಗೆ ನುಗ್ಗಿದೆ. ಆಗ ಬಾಲಕ ಮಾಡಿದ್ದೇನು ಗೊತ್ತಾ.. ಇಲ್ಲಿದೆ ರಿಪೋರ್ಟ್…
ಮಕ್ಕಳಿಗೆ ಕೆಲವೊಂದು ಸಲ ಹೊರ ಪ್ರಪಂಚದ ಬಗ್ಗೆಯೂ ತಿಳಿಸಿ ಕೊಡಬೇಕಾಗುತ್ತದೆ.ಏನೋ ಒಂದು ಅವಘಡಗಳಾದಾಗ ತಕ್ಷಣ ಏನು ಮಾಡಬೇಕು ಅನ್ನೋದನ್ನು ಅರಿತುಕೊಂಡರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ. ಈ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ.ಬಾಲಕನೋರ್ವ ಮನೆಯೊಳಗೆ ಒಬ್ಬನೇ ಮೊಬೈಲ್ ಹಿಡಿದು ಆಟವಾಡುತ್ತಿದ್ದಾಗ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿದೆ, ಇದನ್ನು ಕಂಡ ಬಾಲಕ ಒಂದು ಚೂರೂ ಹೆದರದೆ ಚಾಣಾಕ್ಷತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿಯಾಗಿಸಿದ್ದಾನೆ.
ಬಾಲಕ ಮನೆಯೊಳಗೆ ಸೋಫಾದ ಮೇಲೆ ಮೇಲೆ ಕುಳಿತು ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಈ ವೇಳೆ ಚಿರತೆ ನೇರವಾಗಿ ಮನೆಯೊಳಗೆ ಪ್ರವೇಶ ಮಾಡಿದೆ ಆದರೆ ಬಾಗಿಲ ಬಳಿಯಲ್ಲೇ ಇದ್ದ ಬಾಲಕನನ್ನು ನೋಡಲಿಲ್ಲ ಹಾಗಾಗಿ ನೇರವಾಗಿ ಒಳಗಿನ ಕೊಠಡಿಗೆ ಪ್ರವೇಶ ಮಾಡಿದೆ ಇದನ್ನು ಕಂಡ ಬಾಲಕ ಚಿರತೆ ಒಳಗಿನ ಕೊಠಡಿಗೆ ಪ್ರವೇಶ ಮಾಡುತ್ತಿದ್ದಂತೆ ನಿಧಾನವಾಗಿ ಮನೆಯಿಂದ ಹೊರ ಬಂದ ಬಾಲಕ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿದ್ದಾನೆ. ಆ ಬಳಿಕ ಅಲ್ಲಿನ ನೆರೆಹೊರೆಯವರಲ್ಲಿ ವಿಚಾರ ತಿಳಿಸಿದ್ದಾನೆ ಕೂಡಲೇ ಎಚ್ಚೆತ್ತ ಅಕ್ಕಪಕ್ಕದವರು ಮನೆಯ ಬಳಿ ಬಂದು ಬಾಗಿಲು ಭದ್ರಪಡಿಸಿದ್ದಾರೆ.ಆ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಕಿಟಕಿಯ ಮೂಲಕ ಚಿರತೆಯನ್ನು ಕಂಡಿದ್ದಾರೆ ಈ ವೇಳೆ ಚಿರತೆ ಮನೆಯೊಳಗೆ ಆಚೆ ಈಚೆ ಹೋಗುವುದು ಕಂಡು ಬಂದಿದೆ ಕೂಡಲೇ ಅರಣ್ಯ ಇಲಾಖೆ ಸಿಬಂದಿ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾರೆ. ಇದರಿಂದ ನಿದ್ರೆಗೆ ಜಾರಿದ ಚಿರತೆಯನ್ನು ಕೂಡಲೇ ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.
ಅದೃಷ್ಟವಂತ ಬಾಲಕ:ಮನೆಯೊಳಗೆ ಚಿರತೆ ಪ್ರವೇಶಿಸಿದರೂ ಬಾಲಕ ಒಂದು ಚೂರು ಸದ್ದು ಮಾಡದೆ ಸುಮ್ಮನೆ ಕುಳಿತಿದ್ದಿದ್ದರಿಂದ ಚಿರತೆಗೆ ಗೊತ್ತಾಗಲಿಲ್ಲ. ಅಲ್ಲದೆ ಮನೆಯೊಳಗೆ ಬಂದ ಚಿರತೆ ಆಚೆ ಈಚೆ ನೋಡದೆ ನೇರವಾಗಿ ಮನೆಯ ಒಳಗೆ ಪ್ರವೇಶಿಸಿದರಿಂದ ಚಿರತೆಗೂ ಬಾಲಕ ಇರುವುದು ಗೊತ್ತಾಗಲಿಲ್ಲ, ಕೂಡಲೇ ಮನೆಯ ಹೊರಗೆ ಬಂದು ಬಾಗಿಲು ಹಾಕಿ ಜೀವ ಉಳಿಸಿಕೊಂಡಿದ್ದಾನೆ ಧೈರ್ಯವಂತ ಬಾಲಕ.