Uncategorized

ಸರ್ಜರಿ, ಕಿಮೋ ಮಾಡದೇ ಕ್ಯಾನ್ಸರ್ ಗುಣವಾಗುತ್ತೆ..!

ನ್ಯೂಸ್ ನಾಟೌಟ್: ಕ್ಯಾನ್ಸರ್ ಎಂದರೆ ಗುಣಪಡಿಸಲಾಗದ ಕಾಯಿಲೆ ಎಂಬುದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಆದರೆ ಕ್ಯಾನ್ಸರ್ ಮಾರಿಗೂ ಶೀಘ್ರದಲ್ಲೇ ಔಷಧಿ ಹೊರಬರುತ್ತಿದ್ದು ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿರುವುದು ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ಮೂಡಿಸಿದೆ.

ಹೌದು, ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣ ಮುಖವಾಗುವ ಔಷಧಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಔಷಧ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಮ್ಯಾನಹಟನ್ ಮಹಾನಗರದಲ್ಲಿರುವ ಮೆಮೊರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ವಿಜ್ಞಾನಿಗಳು ಔಷಧಿ ತಯಾರಿಸಿ, ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ.

ವಿಜ್ಞಾನಿಗಳು ದೊಸ್ಟಾರ್ಲಿಮ್ಯಾಬ್ ಎಂಬ ಔಷಧಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಮೊದಲ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆ. ವಿಕಿರಣ ಚಿಕಿತ್ಸೆ, ಸರ್ಜರಿ, ಕಿಮೋಥೆರಪಿ ಮಾಡದೇ ಈ ಔಷಧಿ ಮೂಲಕ ಕ್ಯಾನ್ಸರ್ ಅನ್ನು ಶೇ.೧೦೦ ರಷ್ಟು ನಿರ್ಮೂಲನೆ ಮಾಡಬಹುದು ಎಂಬ ಭರವಸೆ ಮೂಡಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಒಬ್ಬ ಭಾರತೀಯ ಸೇರಿದಂತೆ ಗುದನಾಳ ಕ್ಯಾನ್ಸರ್ ಇರುವ ೧೮ ರೋಗಿಗಳಿಗೆ ದೊಸ್ಟಾರ್ಲಿಮ್ಯಾಬ್ ಔಷಧಿ ನೀಡಲಾಗಿತ್ತು. ಇದರಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರಿಗೆ ಮತ್ತೆ ಎಂಡೋಸ್ಕೋಪಿ, ಪಿಇಟಿ ಅಥವಾ ಎಂಆರ್ಐ ಸ್ಕ್ಯಾನ್ ಮಾಡಿದರೂ ಅವರಲ್ಲಿ ಕ್ಯಾನ್ಸರ್ ಕಣಗಳು (ಗಡ್ಡೆ) ಪತ್ತೆಯಾಗಲಿಲ್ಲ. ರೋಗಿಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ದೊಸ್ಟಾರ್ಲಿಮ್ಯಾಬ್ ಔಷಧವನ್ನು ೬ ತಿಂಗಳವರೆಗೂ ಮೂರು ವಾರಗಳಿಗೆ ಒಮ್ಮೆ ನೀಡಲಾಗಿತ್ತು. ಇವು ಕ್ಯಾನ್ಸರ್ ಕಣಗಳನ್ನು ನಾಶ ಮಾಡಿದ್ದು, ಯಾವುದೇ ಅಡ್ಡ ಪರಿಣಾಮ ಉಂಟು ಮಾಡಿಲ್ಲ. ಹಾಗೇ ಕ್ಯಾನ್ಸರ್ ದೇಹದ ಬೇರೆ ಭಾಗಗಳಿಗೂ ವ್ಯಾಪಿಸಿಲ್ಲ ಎಂಬುದು ಪ್ರಾಯೋಗಿಕ ಪರೀಕ್ಷೆ ಮೂಲಕ ಖಚಿತವಾಯಿತು. ಈ ಔಷಧಿ ಕ್ಯಾನ್ಸರ್ ಕಣಗಳನ್ನು ಮಾತ್ರ ನಾಶಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸರ್ಕಾರಗಳು ಈ ಔಷಧಿ ಬಳಕೆಗೆ ಅನುಮತಿ ನೀಡಿದರೆ, ಇದರ ವೆಚ್ಚ ದುಬಾರಿಯಾಗಲಿದೆ. ಒಂದು ಡೋಸ್ ದೊಸ್ಟಾರ್ಲಿಮ್ಯಾಬ್ ಔಷಧಿಗೆ ರು. ೮.೫೫ ಲಕ್ಷ (೧೧,೦೦೦ ಅಮೆರಿಕ ಡಾಲರ್) ವೆಚ್ಚವಾಗಲಿದೆ. ಒಂದು ಅಂದಾಜಿನ ಪ್ರಕಾರ ಇಡೀ ಚಿಕಿತ್ಸೆಗೆ ರು. ೭೦ ಲಕ್ಷ ಖರ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಚೇತರಿಸಿಕೊಂಡಿರುವ ರೋಗಿಗಳ ಆರೋಗ್ಯವನ್ನು ಮುಂದಿನ ಹಂತಗಳಲ್ಲಿ ಅಧ್ಯಯನ ಮಾಡಬೇಕು. ನಂತರ ದೊಡ್ಡ ಪ್ರಮಾಣದಲ್ಲಿ ಮತ್ತಷ್ಟು ಪ್ರಯೋಗಗಳನ್ನು ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಬೇಕು. ನಂತರ ಬಳಕೆಗೆ ಯೋಗ್ಯ ಎಂದು ತಜ್ಞರು ಒಪ್ಪಿದ ನಂತರವೇ ಸಾರ್ವಜನಿಕ ಬಳಕೆಗೆ ನೀಡಲಾಗುವುದು ಎಂದು ಮೆಮೊರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ವಿಜ್ಞಾನಿಗಳು ಹೇಳಿದ್ದಾರೆ.

Related posts

ಕಸ್ಟಮ್ಸ್ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಾಲ್ವರು ಪ್ರಯಾಣಿಕರು..!ಬರೋಬ್ಬರಿ 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್‌ ವಶಕ್ಕೆ

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಸಾಕಷ್ಟು ಹಣ ಮೀಸಲು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಆಟೋ ಎಕ್ಸ್ ಪೋ 2023 ವೇಳೆ ದುರಂತ, ವಿಡಿಯೊ ವೈರಲ್!