ನ್ಯೂಸ್ ನಾಟೌಟ್: ಕ್ಯಾಬ್ ಡ್ರೈವರ್ ನಿದ್ದೆ ಮಾಡುತ್ತಿದ್ದನ್ನು ಗಮನಿಸಿದ ಪ್ರಯಾಣಿಕನೊಬ್ಬ ಡ್ರೈವರ್ ಬಳಿ ಇದ್ದ ಕೀ ಪಡೆದು ತಾನೇ ಕ್ಯಾಬ್ ಓಡಿಸಿ ತಾನು ತಲುಪಬೇಕಿದ್ದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಲ್ಲದೇ ಚಾಲಕನ ಬಗ್ಗೆ ಅನುಕಂಪ ತೋರಿಸಿ, ಕ್ಯಾಬ್ ನ ಆ್ಯಪ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ನೀಡಿ.100 ರೂ. ಟಿಪ್ಸ್ ಸಹ ಕೊಟ್ಟು ಔದಾರ್ಯ ಮೆರೆದಿದ್ದಾರೆ.
ತಾಲೂಕಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಕ್ಯಾಬ್ ಒಂದರಲ್ಲಿ ಪ್ರಯಾಣಿಕ ಮಿಲಿಂದ್ ಚಂದ್ವಾನಿ ತೆರಳುತ್ತಿದ್ದರು. ಕ್ಯಾಬ್ ನಲ್ಲಿ ಚಾಲಕನು ನಿದ್ರೆಗೆ ಜಾರಿತ್ತಿದ್ದನ್ನು ಗಮನಿಸಿದ ಮಿಲಿಂದ್, ತಾನೇ ಕ್ಯಾಬ್ ಅನ್ನು ಚಾಲನೆ ಮಾಡಿಕೊಂಡು ಮನೆಗೆ ತಲುಪಿದ್ದಾರೆ. ಶನಿವಾರ(ಡಿ.28) ನಸುಕಿನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿ ಕೊಂಡಿರುವ ಮಿಲಿಂದ್ ಚಂದ್ವಾನಿ ಎಂಬ ಐಐಎಂನ ಎಂಬಿಎ ಪದವೀಧರ, “ಜೀವನದಲ್ಲಿ ಕೆಲವೊಮ್ಮೆ ಅಸಹಜ ಕೆಲಸಗಳನ್ನು ನಾವು ಮಾಡಬೇಕಾದ ಸಂದರ್ಭಗಳು ಒದಗಿ ಬರುತ್ತದೆ’ ಎಂದು ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಿಂದ ಕ್ಯಾಬ್ ಏರಿಕೊಂಡು ಬೆಂಗಳೂರಿನೆಡೆಗೆ ಸಾಗುವಾಗ ಕ್ಯಾಬ್ ಚಾಲಕ ಆಗಾಗ ನಿದ್ದೆ ಮಾಡುತ್ತಿದ್ದರು. ಹೋಗುವ ದಾರಿಯಲ್ಲಿ ನಿಲ್ಲಿಸಿ ಒಂದು ಟೀಯೊಂದಿಗೆ ಸಿಗರೆಟ್ ಸೇದಿದರೂ ಆತನನ್ನು ನಿದ್ದೆ ಬಿಡುತ್ತಿರಲಿಲ್ಲ. ಇದರಿಂದಾಗಿ ನನಗೆ ತೊಂದರೆಗಳು ಹೆಚ್ಚಾಗಿರುವ ಕಾರಣದಿಂದಾಗಿ, ನಾನೇ ಕ್ಯಾಬ್ ಚಾಲನೆ ಮಾಡುತ್ತೇನೆ ಎಂದು ಕ್ಯಾಬ್ ಚಾಲಕನಲ್ಲಿ ಕೇಳಿದಾಕ್ಷಣ ಆತನು ದಿಢೀರ್ ಎಂದು ಕ್ಯಾಬ್ ನ ಕೀ ಕೊಟ್ಟು, ಗೂಗಲ್ ಮ್ಯಾಪ್ ನಲ್ಲಿ ತೋರಿಸಿದ ರೀತಿ ದಾರಿಯಲ್ಲಿ ಸಾಗಿ ನಾವು ಗಮ್ಯ ಸ್ಥಾನಕ್ಕೆ ತಲುಪಿದ್ದೇನೆ’ ಎಂದು ಹೇಳಿದ್ದಾರೆ.
ನಂತರ ಚಾಲಕ ಪಕ್ಕದ ಸೀಟ್ ನ್ನು ಹಿಂದಕ್ಕೆ ಸರಿಸಿಕೊಂಡು, ನೆಮ್ಮದಿಯಿಂದ ನಿದ್ರಿಸಿದ್ದಾನೆ.