ನ್ಯೂಸ್ ನಾಟೌಟ್ : 2022ರ ನವೆಂಬರ್‌ನಲ್ಲಿ ನಡೆದಿದ್ದ ಲೆಕ್ಕ ಪರಿಶೋಧಕ (ಸಿ.ಎ) ಮುಖ್ಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಸುರತ್ಕಲ್ ಹೊಸಬೆಟ್ಟುವಿನ ರಮ್ಯಶ್ರೀ ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ.
ಈ ಪರೀಕ್ಷೆಯಲ್ಲಿ ನವದೆಹಲಿಯ ಹರ್ಷ ಚೌಧರಿ (618 ಅಂಕ) ಮೊದಲ ಶ್ರೇಯಾಂಕ ಪಡೆದಿದ್ದು ರಮ್ಯಶ್ರೀ (617 ಅಂಕ) ಮತ್ತು ಇಂದೋರ್‌ನ ಶಿಖಾ ಜೈನ್ ದ್ವಿತೀಯ ಶ್ರೇಯಾಂಕ ಹಂಚಿಕೊಂಡಿದ್ದಾರೆ. ಈ ಸಾಧನೆ ಕುರಿತು ಸಂತಸ ಹಂಚಿಕೊಂಡ ರಮ್ಯಶ್ರೀ, ‘ಲೆಕ್ಕಪರಿಶೋಧಕ ಹುದ್ದೆಗೆ ಸಮಾಜದಲ್ಲಿ ಘನತೆ ಇದೆ. ಮೊದಲ ಪ್ರಯತ್ನದಲ್ಲೇ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ಹರ್ಷ ತಂದಿದೆ’ ಎಂದರು. ‘ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕೆಂಬುದು ನನ್ನ ಅಮ್ಮ ಮೀರಾ ಕನಸಾಗಿತ್ತು. ಅವರು ಅನಿವಾರ್ಯವಾಗಿ ನ್ಯಾಷನಲ್ ಇನ್ಶೂರನ್ಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಬೇಕಾಗಿ ಬಂದಿದ್ದರಿಂದ ಇದನ್ನು ಸಾಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ನನ್ನ ಸಾಧನೆ ಮೂಲಕ ಅಮ್ಮನ ಕನಸು ನೆರವೇರಿದ್ದು ಖುಷಿ ಕೊಟ್ಟಿದೆ’ ಎಂದು ತಿಳಿಸಿದರು.
‘ನನಗೆ ಯಾವತ್ತೂ ಅಮ್ಮನೇ ಪ್ರೇರಣೆ. ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಉದ್ಯೋಗಿರುವ ನನ್ನ ತಂದೆ ರಮೇಶ್ ರಾವ್, ಸಹೋದರ ಹಾಗೂ ಅತ್ತೆ ಜಯಂತಿ ತುಂಬಾ ಬೆಂಬಲ ನೀಡಿದ್ದಾರೆ’ ಎಂದರು.ರಮ್ಯಶ್ರೀ ಅವರು ಕಾಮತ್ ಆ್ಯಂಡ್ ರಾವ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ಹಾಗೂ ಎಂಆರ್‌ಪಿಎಲ್‌ನಲ್ಲಿ ಕೈಗಾರಿಕಾ ತರಬೇತಿ ಪಡೆದಿದ್ದಾರೆ. ಸುರತ್ಕಲ್‌ನ ವಿದ್ಯಾದಾಯಿನಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಗೋವಿಂದದಾಸ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಇಗ್ನೊ) ಬಿ.ಕಾಂ ಪದವಿ ಪಡೆದಿದ್ದರು. ಸಿ.ಎ ಅಖಿಲ ಭಾರತ ಆಂತರಿಕ ಪರೀಕ್ಷೆಯಲ್ಲಿ 16ನೇ ಶ್ರೇಯಾಂಕ ಪಡೆದಿದ್ದರು. ‘ನಿತ್ಯ 12 ಗಂಟೆಯಿಂದ14 ಗಂಟೆ ಪರೀಕ್ಷಾ ತಯಾರಿ ನಡೆಸುತ್ತಿದ್ದೆ. ಅಗತ್ಯ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಶಾಯರಿ ರಚನೆ ನನ್ನ ಹವ್ಯಾಸ. ಬಿಡುವಿರುವಾಗ ಪುಸ್ತಕ ಓದಲು, ಸಂಗೀತ ಆಲಿಸಲು ಇಷ್ಟಪಡುತ್ತೇನೆ’ ಎಂದರು. ಕಳೆದ ವರ್ಷ ಸಿ.ಎ. ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲೇರ್ ಡಿಸಿಲ್ವ ಮೊದಲ ಶ್ರೇಯಾಂಕ ಪಡೆದಿದ್ದರು.