ನ್ಯೂಸ್ ನಾಟೌಟ್ :2013ರ ಎಪ್ರಿಲ್ 9 ರಂದು ಕಹಿ ಘಟನೆಯೊಂದು ನಡೆದೇ ಹೋಗಿತ್ತು.ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಘಟನೆಯಲ್ಲಿ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡ ಘಟನೆಗೆ ಇದೀಗ ಹತ್ತು ವರ್ಷ ಸಂದಿವೆ.ಅದರ ಕಹಿ ನೆನಪು ಇನ್ನೂ ಮಾಸಿಲ್ಲ.ಈ ಭೀಕರ ದುರಂತ ಕುಟುಂಬಸ್ಥರನ್ನು ಮತ್ತೆ ಮತ್ತೆ ಕಾಡುತ್ತಿದೆ.
ಮಂಗಳೂರಿನಿಂದ ಬೆಂಗಳೂರಿನತ್ತ ಯಮರೂಪದಂತೆ ಬಂದ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿದ್ದಿತ್ತು.ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿತ್ತು. ಪರಿಣಾಮ, ಹಚ್ಚ ಹಸಿರಾದ ಕೃಷಿ ತೋಟ ಸುಟ್ಟು ಕರಕಲಾದವು. ಮನೆ-ಅಂಗಡಿಯೊಳಗಿದ್ದ ಜನರೆಲ್ಲಾ ಬೆಂಕಿಗೆ ಸಿಲುಕಿದರು.ಕೆಲವರು ಈ ದುರಂತ ಕಂಡು ಪ್ರಾಣ ರಕ್ಷಣೆ ಮಾಡಿಕೊಂಡರೆ, ಇನ್ನುಳಿದ 13 ಮಂದಿ ದುರಂತ ಅಂತ್ಯವನ್ನೇ ಕಂಡಿದ್ದಾರೆ.ಹೊಟ್ಟೆ ಚುರ್ರೆನ್ನುವ ಈ ಘಟನೆಗೆ ಇಡೀ ರಾಜ್ಯದ ಜನರೇ ಮರುಕ ವ್ಯಕ್ತ ಪಡಿಸಿದ್ದರು.ಘಟನೆಯಲ್ಲಿ ಮಹಿಳೆ ಮಕ್ಕಳನ್ನು ಒಳಗೊಂಡಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಟ್ಯಾಂಕರ್ನಿಂದ ಹುಟ್ಟಿದ ಬೆಂಕಿ ಒಮ್ಮೆಗೇ ಇಡೀ ಊರಿಗೆ ಹರಡಿ ೯ ಮಂದಿ ಸಜೀವ ದಹನವಾದರು. ಆರು ಮನೆ, 2 ಅಂಗಡಿ, 1 ಗ್ಯಾರೇಜು, 6 ವಾಹನ ಭಸ್ಮವಾಗಿದ್ದಲ್ಲದೇ, ತೋಟ, ಗುಡ್ಡೆಗಳಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು.ಬೆಳಗ್ಗೆ 10.05ಕ್ಕೆ ಹಬ್ಬಿದ ಬೆಂಕಿ ನಿಯಂತ್ರಣಕ್ಕೆ ಬಂದಾಗ ಸಂಜೆ 4 ಗಂಟೆ ಆಗಿತ್ತು.
ಘಟನೆಯಲ್ಲಿ ಸಿಲುಕಿ ಮೈಯಲ್ಲಿದ್ದ ಬಟ್ಟೆ ಬರೆಯೆಲ್ಲಾ ಸುಟ್ಟು, ಮೈ ಚರ್ಮ ಸುಟ್ಟು ಜೀವ ಉಳಿಸಲು ಯುವಕನೋರ್ವ ಹೆದ್ದಾರಿಯಲ್ಲಿ ಓಡೋಡಿ ಬರುತ್ತಿರುವ ಹೃದಯ ವಿದ್ರಾವಕ ಘಟನೆಯು ವಿಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿದ್ದು, ಮನ ಕಲಕುವಂತಿತ್ತು. ಅಂದು ಟ್ಯಾಂಕರ್ ದುರಂತ ಸಂಭವಿಸಿದ ಬಳಿಕ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಲು ಕೋಡಿಂಬಾಡಿ ರೈ ಎಸ್ಟೇಟ್ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಪ್ರವರ್ತಕ ಅಶೋಕ್ ಕುಮಾರ್ ರೈಯವರು ಸಂತ್ರಸ್ಥರ ಹೋರಾಟ ಸಮಿತಿ ರೂಪಿಸಿ ಹೋರಾಟ ಮಾಡಿದ್ದರು.