ಕರಾವಳಿ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಎಚ್ಚರ! ನಾಗರಿಕರ ದೂರು ಕೇಳಲು ಬಂದಿದೆ ಹೊಸ ಆ್ಯಪ್

ನ್ಯೂಸ್ ನಾಟೌಟ್: ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಯಿಂದ ಹೊಸ ಉಪಾಯವನ್ನು ಜಾರಿಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ರಾಜ್ಯ ತಂಬಾಕು ನಿಯಂತ್ರಣ ಘಟಕ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಮಂಗಳ ಗಂಗೋತ್ರಿಯ ಸಹಯೋಗದಲ್ಲಿ ಮಂಗಳವಾರ ಫೆ.೨೮ ರಂದು ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸ್ಟಾಪ್ ಟೊಬ್ಯಾಕೋ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತೀನಿತ್ಯ ಕಂಡು ಬರುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಇಷ್ಟು ದಿನ ಮೂಕ ಪ್ರೇಕ್ಷಕರಂತಿರಬೇಕಾಗಿತ್ತು.

ಆದರೆ, ಇದೀಗ ದೂರ ನೀಡಲು ಸರ್ಕಾರ ವೇದಿಕೆಯೊಂದನ್ನು ಕಲ್ಪಿಸಿದೆ. ಸ್ಟಾಪ್ ಟೊಬ್ಯಾಕೋ ಮೊಬೈಲ್ ಆ್ಯಪನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವವರ ಫೋಟೋ ತೆಗೆದು, ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ. ನಂತರ ಫೋಟೋವನ್ನು ಆಧರಿಸಿ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಮದು ವರದಿ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಆಯುಕ್ತ ರಂದೀಪ್ ಅವರು ಮಾತನಾಡಿ, ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ಅಡ್ಡಿಯಾಗಿರುವ ವಿತಂಡವಾದಿಗಳ ಸಂಖ್ಯೆ ದೊಡ್ಡದಿದೆ. ಇಂತಹವರನ್ನು ಮೀರಿ ಕಾರ್ಯ ಸಾಧಿಸಬೇಕಿದೆ ಎಂದರು.

ನಾಗರಿಕರು ಗೂಗಲ್ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು (ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ), ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡವರು, ನಿಯಮ ಉಲ್ಲಂಘಿಸುತ್ತಿರುವ ಜನರ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಅಪ್ಲಿಕೇಶನ್’ನಲ್ಲಿ ಜಿಪಿಎಸ್’ನ್ನು ಸಕ್ರಿಯಗೊಳಿಸಲಾಗಿದ್ದು, ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ನಿಯಮ ಉಲ್ಲಂಘನೆಯ ಸ್ಥಳವು ಸ್ವಯಂಚಾಲಿತವಾಗಿ ಫೀಡ್ ಆಗುತ್ತದೆ. ನಂತರ ದೂರು ಆಯಾ ಜಿಲ್ಲೆಯ ತಂಬಾಕು ನಿಯಂತ್ರಣ ವಿಭಾಗಕ್ಕೆ ತಲುಪಲಿದೆ.

ಈ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಾಪಾನ ಮಾಡುವುದು, ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವುದು, ಶಿಕ್ಷಣ ಸಂಸ್ಥೆಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಎಚ್ಚರಿಕೆಯ ಸಂದೇಶಗಳಿಲ್ಲದೆ ಸಿಗರೇಟುಗಳ ಮಾರಾಟ ಮಾಡುವುದರ ವಿರುದ್ಧ ನಾಗರೀಕರು ಈ ಆ್ಯಪ್ ಬಳಸಿ ದೂರು ಸಲ್ಲಿಸಬಹುದಾಗಿದೆ.

Related posts

ಕೆವಿಜಿ ಕ್ಯಾಂಪಸ್ ನ್ಯೂಸ್: ಒಂದು ಕ್ಯಾಂಪಸ್ ಹಲವು ವಿಭಿನ್ನ ಕಾರ್ಯಕ್ರಮ, ಒಂದು ಕ್ಲಿಕ್ ಕ್ಯಾಂಪಸ್ ನ ಹಲವು ಅಪ್ಡೇಟ್ಸ್ ಇಲ್ಲಿದೆ ವೀಕ್ಷಿಸಿ

ಚೆಂಬು-ದಬ್ಬಡ್ಕ: ಆ್ಯಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರು..!

ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟೆಲಿಫೋನ್ ಕೇಬಲ್ ಸಂಗ್ರಹಿಸುತ್ತಿದ್ದರು,ಬೈಕ್ ನಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದರು