ಕರಾವಳಿ

ನೇತ್ರಾವತಿ ನದಿ ಹೂಳಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು,ನದಿಯಿಂದ ಮೇಲಕ್ಕೆತ್ತಿದರೂ ಫಲಿಸದ ಪ್ರಯತ್ನ

ನ್ಯೂಸ್ ನಾಟೌಟ್: ನೇತ್ರಾವತಿ ನದಿಯಲ್ಲಿ ಮತ್ತೊಂದು ದುರಂತ ನಡೆದಿದೆ. ಇದೀಗ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಮೃತ ದುರ್ದೈವಿ. ಘಟನೆ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವಕ್ಕೆ ಪ್ರಕಾಶ್‌ರವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿದ್ದರು. ಸ್ನೇಹಿತರೊಂದಿಗೆ ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ನದಿ ನೀರಿಗೆ ಅಡಿಕೆ ಮರವನ್ನು ಅಡ್ಡಲಾಗಿ ಹಾಕಿದ್ದು, ಅದರಲ್ಲಿ ನಡೆದುಕೊಂಡು ಹೋಗಬೇಕಾದರೆ ಕಾಲು ಜಾರಿ ಬಿದ್ದು ಪ್ರಕಾಶ್ ನದಿ ನೀರಿನ ಹೂಳಿನಲ್ಲಿ ಹೂತು ಹೋಗಿದ್ದರು. ಈಜುವಿನಲ್ಲಿ ಪರಿಣಿತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೆ ನದಿ ನೀರಿನಲ್ಲಿ ಪ್ರಕಾಶ್‌ರವರು ಮುಳುಗಿದ್ದಾರೆ.

ಕೂಡಲೇ ಸ್ಥಳೀಯ ಈಜುಗಾರರು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿ ಸಾಧ್ಯವಾಗದೇ ಇದ್ದಾಗ, ಉತ್ತರ ಪ್ರದೇಶ ಮೂಲದ ಮರಳು ತೆಗೆಯುವ ಕಾರ್ಮಿಕರು ಶೋಧ ನಡೆಸಿ ಮೇಲಕ್ಕೆತ್ತಿದರು. ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೈಕಂಪಾಡಿಯ ಎಂ.ಸಿ.ಎಫ್ ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್, ಉದ್ಯೋಗದ ಜತೆಗೆ ಕೃಷಿ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರೂ ಆಗಿದ್ದರು. ಪ್ರಕಾಶ್‌ರವರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Related posts

ಬೆಳ್ಳಂಬೆಳಗ್ಗೆ ಶಬರಿಮಲೆ ದರ್ಶನಕ್ಕೆ ಬಂದಿದ್ದ 6ರ ಬಾಲಕಿ;ಕಚ್ಚಿದ ಹಾವು,ಆಸ್ಪತ್ರೆಯಲ್ಲಿ ಚಿಕಿತ್ಸೆ

10,000 ಉದ್ಯೋಗ ಕಡಿತಕ್ಕೆ ಗೂಗಲ್ ನಿರ್ಧಾರ, ಉದ್ಯೋಗಿಗಳ ಎದೆಯಲ್ಲಿ ಢವಢವ

ಮಂಗಳೂರಿನಲ್ಲಿ ಮತ್ತೆ ಪಿಎಫ್‌ಐ ಮುಖಂಡರ ಚಳಿ ಬಿಡಿಸಿದ ಪೊಲೀಸರು