ನ್ಯೂಸ್ ನಾಟೌಟ್ : ಕೆಜಿಎಫ್ ಸಿನಿಮಾದ ಚಾಚಾ, ಹಿರಿಯ ನಟ ಹರೀಶ್ ರಾಯ್ (35 ) ಮಹಾಮಾರಿ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಇನ್ನು ಅವರು ಬದುಕುವುದೇ ಕೇವಲ ನಾಲ್ಕು ವರ್ಷವಷ್ಟೇ ಎಂದು ವೈದ್ಯರು ತಿಳಿಸಿದ್ದಾರೆ ಅನ್ನುವ ವಿಚಾರ ತಿಳಿದು ಬಂದಿದೆ.
ಕನ್ನಡದ ಸಿನಿಮಾಗಳನ್ನು ನೋಡುವ ಜನರಿಗೆ ಹರೀಶ್ ರಾಯ್ ಮುಖ ಪರಿಚಯ ಇದ್ದೇ ಇರುತ್ತದೆ. ಭೂಗತ ಲೋಕದ ಸಿನಿಮಾಗಳಲ್ಲಿ ಹರೀಶ್ ರಾಯ್ ಗೆ ಪಾತ್ರವೊಂದು ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ಖಳನಟರಾಗಿ ಹರೀಶ್ ರಾಯ್ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಕೆಜಿಎಫ್ ೨ ಸಿನಿಮಾದಲ್ಲಿ ಚಾಚಾ ಅನ್ನುವ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಈ ನಡುವೆ ಅವರಿಗೆ ಕುತ್ತಿಗೆ ಭಾಗದಲ್ಲಿ ಗೆಡ್ಡೆ ಕಾಣಿಸಿಕೊಂಡಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವ ವಿಚಾರ ಗೊತ್ತಾಗಿದೆ. ಇನ್ನೂ ಚಿಕ್ಕ ಮಕ್ಕಳು. ಕುಟುಂಬ ನಿರ್ವಹಣೆ ಮಾಡುವ ಸಮಯದಲ್ಲಿ ಬದುಕೋದು ನಾಲ್ಕು ವರ್ಷವಷ್ಟೇ ಅನ್ನುವ ವಿಚಾರ ಕೇಳಿ ಹರೀಶ್ ರಾಯ್ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಚಿಕಿತ್ಸೆಗೆ ತಿಂಗಳಿಗೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಹರೀಶ್ ರಾಯ್ ಚಿಕಿತ್ಸೆ ಪಡೆದುಕೊಂಡ ನಂತರವೂ ಎಷ್ಟು ಸಮಯ ಬದುಕುತ್ತಾರೆ ಅನ್ನುವುದರ ಬಗ್ಗೆ ಗ್ಯಾರಂಟಿ ಕೊಟ್ಟಿಲ್ಲ.
ಹೊರಗಡೆ ಗೊತ್ತಾದರೆ ಸಿನಿಮಾ ರಂಗದಲ್ಲಿ ಅವಕಾಶ ಕಳೆದುಕೊಳ್ಳುವ ಭೀತಿ. ತನ್ನೊಳಗೆ ಇಟ್ಟುಕೊಂಡರೆ ನಿತ್ಯ ಮಾನಸಿಕ ಸಂಕಟ. ಮನೆಯಲ್ಲಿ ವಿಪರೀತ ಆರ್ಥಿಕ ಸಮಸ್ಯೆ . ಇದೆಲ್ಲದರ ತೊಳಲಾಟದಲ್ಲಿ ನರಳಾಡುತ್ತಿರುವ ಹರೀಶ್ ರಾಯ್ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಸಿನಿಮಾ …ಸಿನಿಮಾ ಅಂತ ಅಂದುಕೊಂಡು ಆರೋಗ್ಯ ನಿರ್ಲಕ್ಷ್ಯಿಸಿದ ಪರಿಣಾಮ ಇದು ಕತ್ತಿನ ಭಾಗದಲ್ಲಿ ಥೈರಾಯ್ಡ್ ಕ್ಯಾನ್ಸರ್ ಆಗಿ ಬದಲಾಗಿದೆ. ಕನ್ನಡ ಚಿತ್ರರಂಗದ ನಟರು ಕಷ್ಟದಲ್ಲಿದ್ದಾಗ ಕರುನಾಡ ಜನರು ಸಹಾಯ ಹಸ್ತ ಚಾಚಿದ್ದರು. ಇದೀಗ ಹರೀಶ್ ರಾಯ್ ಗೂ ಅದೇ ರೀತಿಯ ಸಹಾಯವನ್ನು ಮಾಡಿದ್ರೆ ಅವರ ಬದುಕಿಗೊಂದು ದಾರಿಯಾಗುತ್ತದೆ.