ನ್ಯೂಸ್ ನಾಟೌಟ್: ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು ಬಿಸಿಗಾಳಿ(ಹೀಟ್ ವೇವ್) ಎಚ್ಚರಿಕೆಯನ್ನು ನೀಡಲಾಗಿದೆ.ಇದೀಗ .ಕ. ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ವರದಿಯಾಗಿದೆ.ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಈ ಎಚ್ಚರಿಕೆ ನೀಡಲಾಗಿದ್ದು, ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ವಿಶೇಷವಾಗಿ ಮುಂದಿನ ಎರಡು ದಿನ ಮುಂದುವರೆಯುವ ಮುನ್ಸೂಚನೆ ಇರುತ್ತದೆ ಎಂದು ತಿಳಿಸಲಾಗಿದೆ.
ನೀವೇನು ಮಾಡಬೇಕು?
ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ ಬಿಡಿ. ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ ಜತೆಗೆ ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವನ್ನು ಸೇವಿಸುವಂತೆ, ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ನಿಮಗೆ ಮೂರ್ಚೆ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಇನ್ನು ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳ ಬಗ್ಗೆಯೂ ಕಾಳಜಿ ವಹಿಸಿ ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ನಿಮ್ಮ ಮನೆಯನ್ನು ತಂಪಾಗಿ ಇರಿಸಿ, ಪರದೆಗಳು, ಶಟರ್ ಗಳು ಅಥವಾ ಸನ್‌ಶೇಡ್ ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ.
ನೀವು ನಿಮ್ಮ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನೇ ಕುಡಿಯಿರಿ. ಎಳನೀರು, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ. ದೇಹವನ್ನು ಮರು-ಜಲೀಕರಣ ಮಾಡಲು ಸಹಾಯ ಮಾಡುತ್ತದೆ. ರೈತರು/ಕೃಷಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡುವಾಗ ಟೋಪಿ ಅಥವಾ ಛತ್ರಿ ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ. ಸಾಧ್ಯವಾದಷ್ಟು ವಾಹನಗಳಿಗೆ ಪುಲ್ ಟ್ಯಾಂಕ್ ಇಂಧನವನ್ನು ಹಾಕಿಸಬೇಡಿ ಹಾಗೂ ನೆರಳಿನಲ್ಲಿ ನಿಲ್ಲಿಸಬೇಕು. ಹೊರಗೆ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಕೂಡಲೇ ಅತೀ ತಂಪಾದ ನೀರು ಕುಡಿಯಬಾರದು ಅಥವಾ ಎ.ಸಿ /ಕೂಲರ್‌ಗಳನ್ನು ಕೂಡಲೇ ಬಳಸಬಾರದು ಎಂದು ಸಲಹೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿರಿ.ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಧರಿಸಿ, ಹತ್ತಿಯ ಟೋಪಿಗಳನ್ನು ಬಳಸಿ, ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಿರಿ, ಸಾಕಷ್ಟು ನೀರು, ಮಜ್ಜಿಗೆ ಕುಡಿಯಿರಿ, ವಾಸವಿರುವ ಕೋಣೆಯನ್ನು ತಂಪಾಗಿರಿಸಿ, ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ, ಬಿಸಿಗಾಳಿಗೆ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಕೊಡಿಸಿ, ಬಿಸಿಗಾಳಿಗೆ ತುತ್ತಾದವರಿಗೆ ಸಾಕಷ್ಟು ನೀರು, ಮಜ್ಜಿಗೆ, ದ್ರವ ರೂಪದ ಆಹಾರ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!