ನ್ಯೂಸ್ ನಾಟೌಟ್: ಬಸ್ ನಲ್ಲಿ ಇಬ್ಬರು ಬಾಲಕಿಯರಿಗೆ ಅಶ್ಲೀಲವಾಗಿ ನಿಂದಿಸಿ, ಲೈಂಗಿಕ ಕಿರುಕುಳ ನೀಡಲು ಕಂಡಕ್ಟರ್ ಸೇರಿ ನಾಲ್ವರು ಯತ್ನಿಸಿದ್ದಾರೆ. ಈ ವೇಳೆ ಚಲಿಸುತ್ತಿದ್ದ ಬಸ್ಸಿನಿಂದ ಬಾಲಕಿಯರು ಜಿಗಿದಿರುವ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ(ಫೆ.11) ಬೆಳಿಗ್ಗೆ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘9ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಅದ್ರೋಟಾದಿಂದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನ ಚಾಲಕ, ಕಂಡಕ್ಟರ್ ಸೇರಿ ಬಸ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಬಾಲಕಿಯರಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆ. ಬಳಿಕ ಬಸ್ ನ ಹಿಂದಿನ ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಬಾಲಕಿಯರು ಬಸ್ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ ಬಸ್ ನಿಲ್ಲಿಸುವುದಿಲ್ಲ ಎಂದು ಅರಿತ ಬಾಲಕಿಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದಾಗಿ ಬಸ್ ನಿಂದ ಜಿಗಿದಿದ್ದಾರೆ’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಭಾವನಾ ತಿಳಿಸಿದ್ದಾರೆ.
ಈ ಸಂಬಂಧ ಪೋಕ್ಸೊ ಪ್ರಕರಣದಡಿ ಚಾಲಕ ಮೊಹಮ್ಮದ್ ಆಶಿಕ್, ಕಂಡಕ್ಟರ್ ಬನ್ಶಿಲಾಲ್ ಮತ್ತು ಹುಕುಮ್ ಸಿಂಗ್ ಮತ್ತು ಮಾಧವ್ ಅಸತಿ ಎಂಬುವವರನ್ನು ಬಂಧಿಸಲಾಗಿದೆ .