ನ್ಯೂಸ್ ನಾಟೌಟ್: ಮೂರು ವರ್ಷದ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್ ಪ್ರೀತ್ ಕೌರ್ ಎಂಬಾಕೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಜಲಂಧರ್ ಮೂಲದ ದೀಪಕ್ ಕುಮಾರ್ (24) ದುಬೈನಿಂದ ಕಳೆದ ತಿಂಗಳು ಬಂದಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದಾಳೆ. ಈ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಈ ಜೋಡಿ ಒಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಮದುವೆ ಮಾತುಕತೆಯೆಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಮುಗಿಸಿಬಿಟ್ಟಿದ್ದರು. ತನ್ನ ಕುಟುಂಬವು ಈ ಮದುವೆಗೆ ಒಪ್ಪಿಕೊಂಡಿದೆ ಎಂದು ಮನ್ ಪ್ರೀತ್ ಕೌರ್ ಎಂಬಾಕೆ ದೀಪಕ್ ಗೆ ತಿಳಿಸಿದ್ದಳು. ಹೀಗಾಗಿ ದೀಪಕ್ ಕುಮಾರ್ ಮನೆಯವರಿಗೆ ಈ ವಿಷಯ ತಿಳಿಸಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದಾನೆ. ಅದಲ್ಲದೇ, ಮದುವೆಯ ದಿನ ವರನ ಕುಟುಂಬವು ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವು ಜನರು ಅಲ್ಲಿಗೆ ಬಂದು, ನಿಮ್ಮನ್ನು ಮದುವೆ ಹಾಲ್‌ಗೆ ಕರೆದುಕೊಂಡು ಬರುತ್ತಾರೆ ಎಂದು ಮದುಮಗಳ ಕುಟುಂಬದವರು ತಿಳಿಸಿದ್ದರು.
ಹೀಗಾಗಿ, ಜಲಂಧರ್ ನ ಮಂಡಿಯಾಲಿ ಗ್ರಾಮದಿಂದ ಮೋಗಾದಲ್ಲಿನ ಮದುಮಗಳು ಹೇಳಿದ ವಿವಾಹ ಸ್ಥಳಕ್ಕೆ ದೀಪಕ್ ಕುಮಾರ್ ತನ್ನ ಕುಟುಂಬದ ಸಮೇತ ಬೆಳಗ್ಗೆ ಬಂದು ತಲುಪಿದ್ದಾರೆ. ಆದರೆ ಸಂಜೆ ಐದು ಗಂಟೆ ಕಳೆದರೂ ಹುಡುಗಿ ಕಡೆಯವರು ಬರಲೇ ಇಲ್ಲ. ಫೋನ್ ಮಾಡಿದರೂ ಸಂಪರ್ಕ ಸಿಗುತ್ತಿರಲಿಲ್ಲ. ಕಾದು ಕಾದು ಸುಸ್ತಾದ ಬಳಿಕ, ‘ರೋಸ್ ಗಾರ್ಡನ್ ಪ್ಯಾಲೇಸ್’ ಎಲ್ಲಿದೆ ಎಂದು ಸ್ಥಳೀಯರನ್ನು ವಿಚಾರಿಸಿದ್ದಾರೆ.
ಆದರೆ ಮೋಗಾದಲ್ಲಿ ಅಂತಹ ಜಾಗವೇ ಇಲ್ಲ ಎಂದು ತಿಳಿದು ಶಾಕ್ ಆಗಿದ್ದಾರೆ. ಆ ವೇಳೆಗೆ ತಾನು ಮೋಸ ಹೋಗಿರುವುದಾಗಿ ವರನಿಗೆ ತಿಳಿದಿದೆ. ಆ ಬಳಿಕ ಮದುಮಗ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರು ನೀಡಿದ್ದಾನೆ. ಆನ್ಲೈನ್ ನಲ್ಲಿ ಫಿಕ್ಸ್ ಆದ ಮದುವೆ ಪೊಲೀಸ್ ಠಾಣೆ ಮೆಟ್ಟಿಲವರೆಗೆ ತಲುಪಿದೆ.
ದುಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ದೀಪಕ್, ತಾನು ಇನ್ ಸ್ಟಾಗ್ರಾಮ್ ಮೂಲಕ ಸಂವಹನ ನಡೆಸಿದ್ದೇನೆ. ಅವಳನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ.ಈ ಕಾರ್ಯಕ್ರಮಕ್ಕೂ ಮುನ್ನ ಅವರಿಗೆ 50,000 ರೂ. ನೀಡಿರುವುದಾಗಿ ತಿಳಿಸಿದ್ದಾನೆ. ಇತ್ತ ದೀಪಕ್ ಅವರ ತಂದೆ ಪ್ರೇಮ್ ಚಂದ್, ತನ್ನ ಮಗನ ಮದುವೆಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಊಟದ ವ್ಯವಸ್ಥೆ ಸೇರಿದಂತೆ ಸಮಾರಂಭಕ್ಕೆ ವೀಡಿಯೋಗ್ರಾಫರ್ ಅನ್ನು ಬುಕ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.