ನ್ಯೂಸ್ ನಾಟೌಟ್: ವಂಚಕನೊಬ್ಬ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿ ಕೇರಳದ ತ್ರಿಶೂರ್ ಸೈಬರ್ ಪೊಲೀಸರಿಗೆ ಕರೆ ಮಾಡಿ ಪೇಚಿಗೆ ಸಿಲುಕಿದ ಸ್ವಾರಸ್ಯಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪೊಲೀಸ್ ಸಮವಸ್ತ್ರ ಧರಿಸಿದ್ದ ವಂಚಕ ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿ ಪೊಲೀಸರಿಗೆ ಕರೆ ಮಾಡುತ್ತಾನೆ. ತ್ರಿಶೂರ್ ಸೈಬರ್ ಸೆಲ್ ಅಧಿಕಾರಿ ಕ್ಯಾಮೆರಾ ಆನ್ ಮಾಡಿದ ತಕ್ಷಣ, ವಂಚಕನಿಗೆ ತಾನು ನಿಜವಾಗಿಯೂ ಪೊಲೀಸರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಮನವರಿಕೆಯಾಗಿದೆ. ಈ ಕುರಿತು ತ್ರಿಶೂರ್ ಸಿಟಿ ಪೊಲೀಸರು ಹಂಚಿಕೊಂಡಿರುವ ವೀಡಿಯೊ ಭಾರಿ ವೈರಲ್ ಆಗಿದ್ದು, 162,000 ಮಂದಿ ವೀಕ್ಷಿಸಿದ್ದಾರೆ. 7,600 ಮಂದಿ ಲೈಕ್ ಮಾಡಿದ್ದಾರೆ. ನೈಜ ಪೋಲೀಸರ ಜೊತೆ ಮಾತನಾಡುತ್ತಿರುವುದನ್ನು ಕಂಡು ವಂಚಕನು ಒಮ್ಮೆಲೇ ತಬ್ಬಿಬ್ಬಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪೊಲೀಸರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರನ್ನು ನಗೆಗಡಲಲ್ಲಿ ತೇಲಿಸಿದೆ. ಸೈಬರ್ ವಂಚನೆಯ ಅಪಾಯಗಳನ್ನು ವೀಕ್ಷಕರಿಗೆ ತಿಳಿಸಲು ತ್ರಿಶೂರ್ ಪೊಲೀಸರು ವೀಡಿಯೊವನ್ನು ಬಳಸಿದ್ದಾರೆ. ಯಾರಾದರೂ ಸೈಬರ್ ಅಪರಾಧಕ್ಕೆ ಬಲಿಯಾದವರು ತಕ್ಷಣ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ಅದನ್ನು ವರದಿ ಮಾಡುವಂತೆ ಅವರು ತಿಳಿಸಿದ್ದಾರೆ.