ನ್ಯೂಸ್ ನಾಟೌಟ್: ಕೊಡಗಿನ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಕಾಫಿ ತೋಟವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಪ್ರಕರಣ ಭೇದಿಸಿರುವ ಕೊಡಗು ಪೊಲೀಸರು, ಆರೋಪಿಗಳನ್ನು ಶನಿವಾರ(ಅ.26) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆ ಆರೋಪಕ್ಕೆ ಸಂಬಂಸಿದಂತೆ ತೆಲಂಗಾಣ ಮೂಲದ ಪಿ.ನಿಹಾರಿಕಾ (29), ಆಂಧ್ರದ ನಿಖಿಲ್ ವೈ ರೆಡ್ಡಿ(28) ಹರಿಯಾಣದ ಅಂಕೂರ್ ರಾಣ (30) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅ.8ರಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಆರಂಭಿಸಲಾಗಿತ್ತು.
ಆರೋಪಿ ನಿಹಾರಿಕಾ ಎಂಬವಳು ಮೃತ ರಮೇಶ್ ಕುಮಾರ್ ಎಂಬವರ ಎರಡನೇ ಪತ್ನಿಯಾಗಿದ್ದು, ಆಸ್ತಿ ಮಾರಾಟದಲ್ಲಿ 8 ಕೋಟಿ ಹಣ ಪಡೆಯುವ ಉದ್ದೇಶದಿಂದ ತನ್ನ ಸ್ನೇಹಿತ ಹರಿಯಾಣ ಮೂಲದ ಅಂಕುರ್ ರಾಣ ಎಂಬಾತನನ್ನು ಅ.1ರಂದು ಹೈದರಾಬಾದ್ ಗೆ ಕರೆಯಿಸಿಕೊಂಡಿದ್ದಳು. ಅ.3ರಂದು ರಮೇಶ್ ಕುಮಾರ್ ಜತೆ ಇಬ್ಬರೂ ಕಾರಿನಲ್ಲಿ ತೆರಳಿದ್ದು, ಹೈದರಾಬಾದ್ ನ ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಇಬ್ಬರೂ ಸೇರಿ ರಮೇಶ್ ಕುಮಾರ್ ನನ್ನು ಹತ್ಯೆ ಮಾಡಿದ್ದರು. ಬಳಿಕ ಅಲ್ಲಿಂದ ಬೆಂಗಳೂರಿಗೆ ಬಂದು ಮತ್ತೊಬ್ಬ ಸ್ನೇಹಿತ ನಿಖಿಲ್ ನನ್ನು ಕರೆದುಕೊಂಡು ಮೃತದೇಹವನ್ನು ನಾಶಪಡಿಸುವ ಉದ್ದೇಶದಿಂದ ಕೊಡಗಿಗೆ ಬಂದಿದ್ದರು. ಸುಂಟಿಕೊಪ್ಪದ ಕಾಫಿ ತೋಟದಲ್ಲಿ ಬೆಂಕಿ ಹಚ್ಚಿ ಅಲ್ಲಿಂದ ತೆರಳಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.
16 ಜನರ ಒಟ್ಟು 4 ವಿಶೇಷ ತನಿಖಾ ತಂಡಗಳನ್ನು ರಚಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸಿದ್ದ ವಾಹನವೊಂದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿತ್ತು. ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Click