ನ್ಯೂಸ್ ನಾಟೌಟ್ : ಉದ್ಯಮಿಯೊಬ್ಬರ ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ನಿವಾಸದಿಂದಲೇ ಅಪಹರಿಸಿದ್ದ ಪ್ರಕರಣದಲ್ಲಿ ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳನ್ನುಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಗುರುವಾರ (ಅ.25) ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ ಎಂಬಲ್ಲಿನ ಬಡಾವಣೆಯ ವಿಜಯ್ ದೇಸಾಯಿ ಎಂಬುವರ ಮನೆಗೆ ನುಗ್ಗಿ ಸ್ವಸ್ತಿ ವಿಜಯ್ ದೇಸಾಯಿ (4) ಮತ್ತು ವಿಯೋಮ್ ವಿಜಯ ದೇಸಾಯಿ (3) ಎಂಬ ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ಮಕ್ಕಳು ಅಪಹರಣಕ್ಕೊಳದ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು, ಮೂರು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಇದೀಗ ಮಕ್ಕಳ ಕಳ್ಳರ ಮೇಲೆ ಫೈರಿಂಗ್ ಮಾಡಿ ಅಥಣಿ ಪೊಲೀಸರು ಇಬ್ಬರೂ ಬಾಲಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇನ್ನು ದುಷ್ಕರ್ಮಿಗಳು ಮಕ್ಕಳನ್ನು ಅಪಹರಣ ಮಾಡಿದ ವಿಡಿಯೋ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಮಕ್ಕಳ ಕಳ್ಳರು ಪತ್ತೆಯಾಗಿದ್ದಾರೆ. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಮಕ್ಕಳ ಕಳ್ಳರನ್ನು ಪೊಲೀಸರು ತಡೆಗಟ್ಟಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸರು ಆತ್ಮರಕ್ಷಣೆಗೆ ದುಷ್ಕರ್ಮಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.
ಈ ವೇಳೆ ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿಯ ಎಡಗಾಲಿಗೆ ಗುಂಡೇಟು ತಗುಲಿದೆ. ಬಳಿಕ ಮಕ್ಕಳಿಬ್ಬರನ್ನೂ ರಕ್ಷಿಸಿ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಅಪಹರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ.
Click