ನ್ಯೂಸ್ ನಾಟೌಟ್: ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಮಸೀದಿ ತೆರವಿಗೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಲಾಠಿಚಾರ್ಜ್ ನಡೆಸಲಾಗಿದೆ.
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.
ಅಕ್ರಮವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಬೇಕು. ರಾಜ್ಯಕ್ಕೆ ಆಗಮಿಸುವ ಹೊರಗಿನವರ ನೋಂದಣಿ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಈ ನಡುವೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಾಕಾರರು ಕೂಡಲೇ ಮಸೀದಿ ತೆರವು ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಪೊಲೀಸರು ಢಳ್ಳಿ ಸುರಂಗ ಮಾರ್ಗದ ಬಳಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಜಲಫಿರಂಗಿ ಬಳಸಿದ್ದಾರೆ. ಈ ವೇಳೆ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಜೌಲಿಯಲ್ಲಿ ಪೊಲೀಸರು ಇಂದು(ಸೆ.11) ಬಿಎನ್ಎಸ್ ಸೆಕ್ಷನ್ 163 (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿ 11.59ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Click