ನ್ಯೂಸ್ ನಾಟೌಟ್: ವಿವಾಹಿತ ಮಹಿಳೆಗೆ ತನ್ನ ಹೈಸ್ಕೂಲ್ ಸಹಪಾಠಿಗಳು ನಿರಂತರ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ನೊಂದ ಮಹಿಳೆ ಆತ್ಮೆಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಿಡೇದಹಳ್ಳಿ ನಿವಾಸಿ ಮಮತಾ (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಡೆತ್ನೋಟ್ ಆಧಾರದಲ್ಲಿ ಗಣೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಅಶೋಕ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಏನಿದು ಘಟನೆ..?
ವಿವಾಹ ಪೂರ್ವದಲ್ಲಿ ಜೆ.ಪಿ.ನಗರದಲ್ಲಿ ವಾಸವಾಗಿದ್ದ ಮಮತಾಗೆ ಆರೋಪಿಗಳು ಹೈಸ್ಕೂಲ್ ಸಹಪಾಠಿಗಳಾಗಿದ್ದರು. ಆ ನಂತರ ಮಮತಾರಿಗೆ ಕೆಲ ವರ್ಷಗಳ ಹಿಂದೆ ಲೋಕೇಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ 6 ವರ್ಷದ ಗಂಡು ಮಗು ಕೂಡ ಇದೆ. ಈ ದಂಪತಿ ಸಿಡೇದಹಳ್ಳಿಯಲ್ಲಿ ವಾಸವಿದ್ದರು. ಪತಿ ಲೋಕೇಶ್ ಫುಡ್ ಡಿಲಿವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ಸಂಜೆ ಪತಿ ಲೋಕೇಶ್, ಹಲವು ಬಾರಿ ಕರೆ ಮಾಡಿದರೂ ಪತ್ನಿ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಪಕ್ಕದ ಮನೆಯವರಿಗೆ ಲೋಕೇಶ್ ಕರೆ ಮಾಡಿದಾಗ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮೊದಲು ಮಮತಾ, ಹೈಸ್ಕೂಲ್ನ ಸಹಪಾಠಿಗಳಾದ ಅಶೋಕ್ ಮತ್ತು ಗಣೇಶ್ ಅವರ ಲೈಂಗಿಕ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಏನಾದರೂ ಆದರೆ ಅದಕ್ಕೆ ಅಶೋಕ್ ಹಾಗೂ ಗಣೇಶ್ ಹೊಣೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಮಮತಾಗೆ ಹೈಸ್ಕೂಲ್ ಸಹಪಾಠಿಗಳಾಗಿದ್ದ ಆರೋಪಿಗಳು, ಆಕೆಗೆ ಅಶ್ಲೀಲ ಸಂದೇಶ ಕಳಿಸುವುದಲ್ಲದೇ ತಮ್ಮೊಂದಿಗೆ ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು. ಸಹಕರಿಸದಿದ್ದರೆ ನಿನ್ನ ಸಂಸಾರ ಹಾಳು ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಈ ವಿಚಾರ ಮಮತಾ ಪತಿಗೂ ಗೊತ್ತಾಗಿ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಸಹ ಆರೋಪಿಗಳು ಮಮತಾಗೆ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ. ಅದರಿಂದ ಮನನೊಂದ ಮಮತಾ, ಡೆತ್ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ತನಿಖೆಯ ವೇಳೆಯಲ್ಲಿ ತಿಳಿದುಬಂದಿದೆ.