ನ್ಯೂಸ್ ನಾಟೌಟ್: ಸೆರೆಮನೆ ವಾಸ ಅನುಭವಿಸುತ್ತಿದ್ದ ಕುಖ್ಯಾತ ರೌಡಿಯೊಬ್ಬ ಬಿಡುಗಡೆಯಾದ ಖುಷಿಗೆ ಬೃಹತ್ ಮೆರವಣಿಗೆ ಆಯೋಜಿಸಿ ಸಾರ್ವಜನಿಕವಾಗಿ ತನ್ನ ಪೌರುಷ ತೋರಿ ಬಳಿಕ ಇದೀಗ ಮತ್ತೇ ಜೈಲು ಸೇರಿದ ಘಟನೆ ಮಹಾರಾಷ್ಟ್ರದ ಸರ್ಕಾರ್ವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಂಪಿಡಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ನಾಸಿಕ್ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3.30ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದ್ದಾನೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮತ್ತೆ ಜೈಲು ಸೇರಿದ್ದಾನೆ.
ಘಟನೆ ಬಗ್ಗೆ ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.
ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ.