ನ್ಯೂಸ್ ನಾಟೌಟ್: ವಿವಾದಗಳ ನಡುವೆಯೂ ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಮುಜಾಫರ್ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ.
ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್ಜಿಒವೊಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಇರುವ ನ್ಯಾಯಪೀಠ ಮುಂದಿನ ವಿಚಾರಣೆ ನಡೆಯವವರೆಗೆ ತಡೆಯಾಜ್ಞೆ ವಿಧಿಸಿ ಆದೇಶ ಹೊರಡಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಗೊಂದಲವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜಾಫರ್ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಗುರುವಾರ ತಿಳಿಸಿದ್ದರು. ಆದರೂ ಪ್ರತಿಪಕ್ಷಗಳು ಈ ನಡೆಯನ್ನು ಖಂಡಿಸಿದ್ದವು.
ಸೋಮವಾರದಿಂದ (ಜು.22) ಉತ್ತರಪ್ರದೇಶದಲ್ಲಿ ಆರಂಭಗೊಂಡ ಕನ್ವರ್ ಯಾತ್ರೆ ಮುಜಾಫರ್ ನಗರದ ಮೂಲಕ ಹಾದು ಹೋಗುತ್ತದೆ. ಈ ಮಾರ್ಗದಲ್ಲಿರು ಎಲ್ಲಾ ಹೋಟೆಲ್ ಮಾಲೀಕರು, ಸಿಬ್ಬಂದಿ ತಮ್ಮ ಹೆಸರಿನ ದಾಖಲೆ ಪ್ರದರ್ಶಿಸಬೇಕು ಎಂಬ ಆದೇಶವನ್ನು ಮುಜಾಫರ್ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಕೆಲವರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ಮುಸ್ಲಿಂ ವ್ಯಾಪಾರಿಗಳು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್ಜಿಒವೊಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಮೇಲಿನಂತೆ ಆದೇಶ ಹೊರಡಿಸಿದೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್ ಪ್ರತಿಕ್ರಿಯಿಸಿ, ಮುಸ್ಲಿಂ ಮಾರಾಟಗಾರರು ಹಿಂದುಗಳಂತೆ ನಟಿಸಿ ಯಾತ್ರಾರ್ಥಿಗಳಿಗೆ ಮಾಂಸಾಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. “ಅವರು ವೈಷ್ಣೋ ಡಾಬಾ ಭಂಡಾರ್, ಶಕುಂಭರಿ ದೇವಿ ಹೋಟೆಲ್ ಮತ್ತು ಶುದ್ಧ ಸಸ್ಯಾಹಾರಿ ಎಂದು ಬೋರ್ಡ್ ಸ್ಥಾಪಿಸಿ ಮಾಂಸಾಹಾರ ಮಾರಾಟ ಮಾಡುತ್ತಾರೆ” ಎಂದು ಅವರು ತಿಳಿಸಿದ್ದರು.