ನ್ಯೂಸ್ ನಾಟೌಟ್: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ನಡು ರಸ್ತೆಯಲ್ಲೇ ಲಾಂಗ್ ಮಚ್ಚು ಝಳಪಿಸಿದ ಘಟನೆ ಉಡುಪಿ ನಗರದ ಕುಂಜಿಬೆಟ್ಟು ಎಂಬಲ್ಲಿ ಕಳೆದ ಶನಿವಾರ ರಾತ್ರಿ (ಮೇ ೧೮ರಂದು) ನಡೆದಿದ್ದು ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಉಲ್ಲೇಖಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆಯೇ ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ. ಆರಂಭದಲ್ಲಿ ಇದು ಗ್ಯಾಂಗ್ ವಾರ್ ಎಂದೇ ಬಿಂಬಿಸಲಾಗಿತ್ತು.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ (Dr K Arun) ಪ್ರತಿಕ್ರಿಯಿಸಿ ಪ್ರಕರಣಕ್ಕೆ ಸಂಬಂಧಿಸಿ ಮೇ 20 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು, ಎರಡು ಬೈಕ್, ಚಾಕು ಮತ್ತು ತಲ್ವಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಯಾವುದೇ ಗ್ಯಾಂಗ್ ವಾರ್ ಅಲ್ಲ ಒಂದೇ ಗುಂಪಿನ ಎರಡು ಪಂಗಡಗಳ ನಡುವೆ ಉಂಟಾದ ವೈಮನಸ್ಸಿನಿಂದ ನಡೆದ ಹೊಡೆದಾಟವಾಗಿದೆ. ಕೃತ್ಯದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.