ನ್ಯೂಸ್ ನಾಟೌಟ್: ನಾಲ್ಕು ವರ್ಷದ ಬಾಲಕನೊಬ್ಬನ ಮೃತದೇಹ ಖಾಸಗಿ ಶಾಲೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ಪಟನಾ ಎಂಬಲ್ಲಿ ನಡೆದಿದೆ. ಈ ಕಾರಣದಿಂದ ಉದ್ರಿಕ್ತರ ಗುಂಪೊಂದು ಶಾಲೆ ಎದುರು ಉಗ್ರ ಪ್ರತಿಭಟನೆ ನಡೆಸಿದ್ದು, ಬೆಂಕಿ ಹಚ್ಚಲು ಯತ್ನಿಸಿದೆ. ಮೇ.16ರ ಗುರುವಾರ ಸಂಜೆಯಾದರೂ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು.
ಶಾಲೆ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಂಶಯ ಮೂಡಿತ್ತು ಎಂದು ಪೋಷಕರು ಹೇಳಿದ್ದಾರೆ. ಬಳಿಕ ಶಾಲೆ ಆವರಣದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ತಮ್ಮ ಮಗುವಿಗೆ ಏನು ಸಂಭವಿಸಿದೆ ಎನ್ನುವ ವಿಚಾರವನ್ನು ಶಾಲೆ ಮುಚ್ಚಿಡುತ್ತಿದೆ ಎಂದು ಪೋಷಕರು ದೂರಿದ್ದಾರೆ.
ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಯುಷ್ ಶಾಲೆಯಲ್ಲಿ ಕಾಣಿಸಿಕೊಂಡಿದ್ದಾನೆ. ಅದಾದ ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಬಾಲಕನ ಹತ್ಯೆ ಪ್ರಕರಣದ ತನಿಖೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ʼʼಪಟನಾದ ದಿಘಾ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಪಕ್ಕದಲ್ಲಿರುವ ಮಗುವಿನ ಮೃತದೇಹ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ಪರಿಶೀಲಸಿದಾಗ ಮಗು ಶಾಲೆಯ ಒಳಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಆದರೆ ಹೊರ ಬಂದಿರುವುದು ದಾಖಲಾಗಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Click 👇