ಸಂಪಾಜೆ: ಕೊಡಗು ಸಂಪಾಜೆಯ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಹತ್ಯೆಯಾಗಿ ಇಂದಿಗೆ ಮೂರು ವರ್ಷವಾಗಿದೆ. ಸತತವಾಗಿ 3 ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿ, ಕೊಡಗು ಮತ್ತು ದಕ್ಷಿಣ ಕನ್ನಡ ಗಡಿಭಾಗ ಸಂಪಾಜೆಯ ಅಭಿವೃದ್ಧಿಯ ಹರಿಕಾರ ಎಂಬ ಹೆಗ್ಗಳಿಕೆಗೆ ಕಳಗಿ ಬಾಲಚಂದ್ರ ಅವರು ಪಾತ್ರರಾಗಿದ್ದರು.
ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ, ಕೊಡಗು ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಯಾಗಿ ಭಾರಿ ಜನ್ನಮನ್ನಣೆ ಗಳಿಸಿದ್ದರು. ಸ್ಥಳೀಯ ಮಟ್ಟದಲ್ಲಿ ತನ್ನ ಕೆಲಸಗಳಿಂದ ರಾಜ್ಯ ಬಿಜೆಪಿ ನಾಯಕರ ಗಮನ ಸೆಳೆದಿದ್ದರು. ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಸಂಪಾಜೆ ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಬಾಲಚಂದ್ರ ಅವರು ಮುಂಚೂಣಿಯ ಪಾತ್ರ ನಿರ್ವಹಿಸಿದ್ದರು. ದಿವಂಗತ ಬಾಲಚಂದ್ರ ಕಳಗಿಯವರ ಸ್ಮರಣಾರ್ಥವಾಗಿ ಇಂದು ಸಂಪಾಜೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ ನೆರವೇರಿತು. ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.