ನ್ಯೂಸ್ ನಾಟೌಟ್: ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳ ಬಳಕೆ ಮಾಡಲು ಕೈದಿಗಳು ಒಂದಿಲ್ಲೊಂದು ತಂತ್ರಗಾರಿಕೆ ಮಾಡುತ್ತಾರೆ. ಮೇಲಾಧಿಕಾರಿಗಳ ತಪಾಸಣೆ ವೇಳೆ ನಿಷೇಧಿತ ವಸ್ತುಗಳನ್ನು ಮುಚ್ಚಿಡಲು ಹೊಸ ಹೊಸ ಐಡಿಯಾ ಹುಡುಕುವುದು ಸಾಮಾನ್ಯ. ಇಲ್ಲೊಬ್ಬ ಕೈದಿ ಜೈಲಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಳ್ಳಲು ಆಗದೆ ಅದನ್ನು ನುಂಗಿದ್ದು ಇದೀಗ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.
ಶಿವಮೊಗ್ಗ ರಾಜೀವ್ಗಾಂಧಿ ಬಡಾವಣೆಯ ನಿವಾಸಿ, ಸೋಗಾನೆಯ ಕೇಂದ್ರ ಕಾರಗೃಹದ ಕೈದಿ ಪರಶುರಾಮ ಅಲಿಯಾಸ್ ಚಿಂಗಾರಿ ಮೊಬೈಲ್ ನುಂಗಿದ್ದವರು. ಮಾ.28ರಂದು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಆತನಿಗೆ ಜೈಲಿನ ಸಿಬ್ಬಂದಿ ಕಾರಾಗೃಹದೊಳಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಹೊಟ್ಟೆನೋವು ಜಾಸ್ತಿ ಆಗುತ್ತಿರುವುದಾಗಿ ಪರಶುರಾಮ ತಿಳಿಸಿದ್ದ. ಅದೇ ದಿನ ರಾತ್ರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಕಲ್ಲಿನಂತಹ ವಸ್ತು ನುಂಗಿರುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದರು.
ಏ.1ರಂದು ಜೈಲಿನ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಏ.3ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಹಿರಿಯ ಮುಖ್ಯ ವೈದ್ಯಾಧಿಕಾರಿಯಿಂದ ಪರೀಕ್ಷಿಸಿ ಏ.6ರಂದು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ಒಳಪಡಿಸಿದಾಗ ಆತನ ಹೊಟ್ಟೆಯಲ್ಲಿರುವುದು ಮೊಬೈಲ್ ಎಂಬುದು ದೃಢಪಟ್ಟಿತ್ತು. ಕೆಲ ದಿನಗಳವರೆಗೆ ಚಿಕಿತ್ಸೆ ಕೊಡಿಸಿ ಏ.25ರಂದು ಶಸ್ತ್ರಚಿಕಿತ್ಸೆ ಮೂಲಕ ಮೊಬೈಲ್ ಅನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮೊಬೈಲ್ ನುಂಗಿದ್ದ ಪರಶುರಾಮನ ಮೇಲೆ ತುಂಗಾನಗರ ಠಾಣೆ ಪೊಲೀಸರು ಇದೀಗ ಮತ್ತೊಂದು ಕೇಸ್ ದಾಖಲಿಸಿಕೊಂಡಿದ್ದಾರೆ.