ನ್ಯೂಸ್ ನಾಟೌಟ್: ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾರನ್ನು ಸಮವಸ್ತ್ರದಲ್ಲಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆಲಂಗಿಸಿದ ಕಾರಣಕ್ಕೆ ಅವರನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಅಮಾನತ್ತುಗೊಳಿಸಿದ ಘಟನೆ ಸೋಮವಾರ(ಎ.22) ನಡೆದಿದೆ.
ಹೈದರಾಬಾದ್ ನ ಸಾಯಿದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕಿಯು ಚುನಾವಣಾ ಪ್ರಚಾರ ನಡೆಸುವಾಗ ಉಮಾದೇವಿ ಕರ್ತವ್ಯನಿರತರಾಗಿದ್ದರು ಎಂದು ಹೇಳಲಾಗಿದೆ. ಇದರ ಬೆನ್ನಿಗೇ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಉಮಾದೇವಿಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಕೆ. ಶ್ರೀನಿವಾಸ್ ರೆಡ್ಡಿ ಅಮಾನತ್ತುಗೊಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಹೈದರಾಬಾದ್ ಪ್ರದೇಶದಲ್ಲಿ ಮಾಧವಿ ಲತಾ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ಅವರ ಬಳಿಗೆ ತೆರಳಿರುವ ಉಮಾದೇವಿ, ಮಾಧರಿ ಲತಾರ ಕೈ ಕುಲುಕಿ ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ. ಇಬ್ಬರು ಮುಗುಳ್ನಗುತ್ತಾ, ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡಿರುವುದನ್ನು ಅದರಲ್ಲಿ ನೋಡಬಹುದಾಗಿದೆ. ರಾಮನವಮಿಯಂದು ಮಸೀದಿಯೊಂದರ ಕಡೆ ಕಾಲ್ಪನಿಕ ಬಾಣ ಬಿಡುತ್ತಿರುವ ಭಂಗಿ ಪ್ರದರ್ಶಿಸುವ ಮೂಲಕ ಕಳೆದ ವಾರ ಮಾಧರಿ ಲತಾ ವಿವಾದಕ್ಕೆ ತುತ್ತಾಗಿದ್ದರು.