ನ್ಯೂಸ್ ನಾಟೌಟ್: ಕೆಲವು ಜನರು ಚಿಕ್ಕ ವಯಸ್ಸಿನಲ್ಲೇ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಕಂಡು ಬೆಳೆದಿರುತ್ತಾರೆ. ಆದರೆ ಅವರ ಆತ್ಮವಿಶ್ವಾಸ, ಶ್ರಮ, ಅಚಲ ನಿರ್ಣಯದಿಂದ ಜೀವನದಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿರುತ್ತದೆ. ತಮಿಳುನಾಡಿನ ಎನ್. ಅಂಬಿಕಾ ಎಂಬಾಕೆ ಮದುವೆಯಾದಾಗ ಕೇವಲ 14 ವರ್ಷ ವಯಸ್ಸಾಗಿತ್ತು. ಬಾಲ್ಯ ವಿವಾಹವಾಗಿದ್ದರು.
ಪತಿ ಪೊಲೀಸ್ ಪೇದೆಯಾಗಿದ್ದರು. ನಂತರ, 18ನೇ ವಯಸ್ಸಿಗೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು ಅಂಬಿಕಾ ಸವಾಲುಗಳ ಜೊತೆ ಜೀವನ ಸಾಗಿಸುತ್ತಿದ್ದರು. ಅಂಬಿಕಾ ಒಮ್ಮೆ ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಅವರ ಪತಿ ಯಾರೋ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರು. ಇದನ್ನು ಗಮನಿಸಿದ ಅಂಬಿಕಾ ಮನೆಗೆ ಬಂದ ನಂತರ ತಮ್ಮ ಪತಿಯನ್ನು ಸೆಲ್ಯೂಟ್ ಹೊಡೆದಿದ್ದು ಉನ್ನತ ಅಧಿಕಾರಿಗೆ ಎಂಬುದನ್ನು ಕೇಳಿ ತಿಳಿದುಕೊಂಡರು. ಇದೇ ಅವರ ಜೀವನದ ದಿಕ್ಕು ಬದಲಾಯಿಸಿದ್ದು,ಇದೇ ಅವರು ಐಪಿಎಸ್ ಅಧಿಕಾರಿಯಾಗಬೇಕೆಂಬ ಛಲ ಹುಟ್ಟಿಸಿತು ಎನ್ನುತ್ತಾರೆ ಆಕೆ. ಹೌದು, ಅಂಬಿಕಾ ಆ ಘಟನೆಯ ನಂತರ ಸುಮ್ಮನೆ ಕುಳಿತುಕೊಳ್ಳಲಿಲ್ಲ.
10ನೇ ತರಗತಿ ಮುಗಿಸುವ ಮೊದಲೇ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿದರು. ಯಾವುದೇ ಹಿಂಜರಿಕೆಯಿಲ್ಲದೆ, ತನ್ನ 10 ನೇ ಮತ್ತು 12 ನೇ ವಿದ್ಯಾರ್ಹತೆಯನ್ನು ಖಾಸಗಿ ಸಂಸ್ಥೆಯಲ್ಲಿ ಮಾಡಿಕೊಂಡರು. ನಂತರ ಸಂಸಾರದ ತಾಪತ್ರಯಗಳು, ಮಕ್ಕಳ ಪಾಲನೆಯ ನಡುವೆಯೇ ತನ್ನ ಪದವಿಯನ್ನು ಮುಗಿಸಿದರು. ನಂತರ, UPSC ಗೆ ಸೂಕ್ತ ತಯಾರಿ ಮಾಡಿಕೊಳ್ಳಲು, ಕೋಚಿಂಗ್ ಪಡೆಯಲು ಚೆನ್ನೈಗೆ ತೆರಳಿದರು. ಈ ಮಧ್ಯೆ, ಅವರ ಪತಿ ತನ್ನದೇ ಆದ ವೃತ್ತಿಯ ಜೊತೆಗೆ ತಮ್ಮ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ಎಷ್ಟೇ ಶ್ರಮವಹಿಸಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರೂ, ಅಂಬಿಕಾ ಮೂರು ಬಾರಿ ಅನುತ್ತೀರ್ಣರಾದರು.ಈ ಸಂದರ್ಭದಲ್ಲಿ ಅವರ ಪತಿ ಮನೆಗೆ ಮರಳಲು ಸಲಹೆ ನೀಡಿದರು. ಆದರೆ, ಗೆದ್ದೇ ಗೆಲ್ಲುವೇ ಎಂಬ ಆತ್ಮವಿಶ್ವಾಸ ಹೊಂದಿದ್ದ,ಅಂಬಿಕಾ ವಿಚಲಿತಳಾಗದೆ, ತನ್ನ ಕನಸುಗಳ ಬಗ್ಗೆ ಸ್ಥಿರವಾಗಿದ್ದರು.
ಪಟ್ಟು ಬಿಡದೆ ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ಪತಿಯ ಅನುಮತಿ ಪಡೆದರು. ಇನ್ನಷ್ಟು ಶ್ರಮವಹಿಸಿ 2008 ರಲ್ಲಿ ತನ್ನ ನಾಲ್ಕನೇ ಬಾರಿ ಪರೀಕ್ಷೆ ಬರೆದರು. ಈ ಬಾರಿ ಅವರ ಅದೃಷ್ಟ ಕೈಕೊಡಲಿಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ಅಂತಿಮವಾಗಿ UPSC ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.ಮಹಾರಾಷ್ಟ್ರ ಕೇಡರ್ನಲ್ಲಿ ನೇಮಕಗೊಂಡಿರುವ ಅಂಬಿಕಾ ಪ್ರಸ್ತುತ ಮುಂಬೈನಲ್ಲಿ ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.