ನ್ಯೂಸ್ ನಾಟೌಟ್: ಆಸ್ತಿ ವಿಚಾರದಲ್ಲಿ ನ್ಯಾಯ ಸಿಗಲಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಬೆಳಕಿಗೆ ಬಂದಿದೆ. ಶನಿವಾರ(ಮಾ.30) ಮಧ್ಯಾಹ್ನ ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಅಶ್ವಿನಿ ಎಂಬಾಕೆ ಎಎಸ್ಐ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲವು ದಿನಗಳಿಂದ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಅಶ್ವಿನಿ ಬಂದು ಹೋಗುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಶ್ವಿನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ.ಆದರೆ ತನ್ನ ಸಮಸ್ಯೆಗೆ ನ್ಯಾಯ ಸಿಗುತ್ತಿಲ್ಲವೆಂಬ ಸಿಟ್ಟಿಗೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಮಾನಸಿಕ ಅಸ್ವಸ್ಥತೆಯಾಗಿರುವ ಅಶ್ವಿನಿ ಕಳೆದ 15 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನಿನ್ನೆ ಠಾಣೆಗೆ ಬಂದ ಅಶ್ವಿನಿ ಎಎಸ್ಐ ನಾಗರಾಜು ಜತೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಏಕಾಏಕಿ ಸಿಟ್ಟಾಗಿ ಕೈಗೆ ಸಿಕ್ಕ ವಸ್ತುವಿನಿಂದ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾಳೆ. ಸದ್ಯ ಹಲ್ಲೆಗೊಳಗಾದ ಎಎಸ್ಐ ನಾಗರಾಜುಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಅಶ್ವಿನಿಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.