ನ್ಯೂಸ್ ನಾಟೌಟ್: ಎನ್ಕೌಂಟರ್ಗೆ ಹೆಸರಾಗಿರುವ ಉತ್ತರಪ್ರದೇಶ ಪೊಲೀಸರು ಎನ್ಕೌಂಟರ್ಗೆ ಬಲಿಯಾದ ಆರೋಪಿಯೋರ್ವನ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿ ಮಾನವೀಯತೆ ಮರೆದಿದ ಘಟನೆ ವರದಿಯಾಗಿದೆ.
ಪೊಲೀಸರೇ ವೆಚ್ಚ ಹಾಕಿ ನಡೆಸಿಕೊಟ್ಟ ಈ ಅದ್ದೂರಿ ಮದುವೆಯನ್ನು ನೋಡಿದ ವಧುವಿನ ತಾಯಿ ನನ್ನ ಮಗಳ ಮದುವೆ ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಪೊಲೀಸರು ಬರೀ ಮದುವೆಯ ವೆಚ್ಚ ಹಾಕಿಲ್ಲ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಮದುವೆ ಮಾಡಿಸಿಕೊಟ್ಟಿರುವುದು ವಿಶೇಷ. ವರ್ಷಗಳ ಹಿಂದೆ ಅಂದರೆ 2023ರ ಮೇ 10 ರಂದು ಉತ್ತರಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಬೆಡ್ಜಿತ್ ಸಿಂಗ್ ಎಂಬುವವರನ್ನು ದುಷ್ಕರ್ಮಿಗಳು ಒರೈ ಜಿಲ್ಲೆಯ ಕೊತ್ವಾಲಿ ಪೊಲೀಸ್ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಾಗಿ ನಾಲ್ಕು ದಿನದಲ್ಲೇ ಈ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳಾದ ರಮೇಶ್ ರೈಕ್ವಾರ್ ಹಾಗೂ ಕಲ್ಲು ಅಹ್ರಿವಾರ್ ಎಂಬುವವರನ್ನು ಸಮೀಪದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ನಲ್ಲಿ ಮುಗಿಸಿದ್ದರು.
ಹೀಗೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಪ್ರಾಣಬಿಟ್ಟ ರಮೇಶ್ ರೈಕ್ವಾರ್ ಮನೆ ಸ್ಥಿತಿ ಮಾತ್ರ ಶೋಚನೀಯವಾಗಿತ್ತು. ಆ ಮನೆಯಲ್ಲಿ ದುಡಿಯುವ ಕೈ ಇರಲಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಯಾವುದೇ ಸಂಪಾದನೆ ಇರಲಿಲ್ಲ, ಜೊತೆಗೆ ಮದುವೆಯಾಗುವ ವಯಸ್ಸಿಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳಿದ್ದರು. ಆರೋಪಿಯ ಕುಟುಂಬದ ಈ ಹಿನ್ನೆಲೆ ಅರಿತ ಪೊಲೀಸರು ಮೃತ ರಮೇಶ್ ರೈಕ್ವಾರ್ ಪತ್ನಿಗೆ, ಪುತ್ರಿಯರ ಮದುವೆ ಸಮಯದಲ್ಲಿ ಸಹಾಯ ಮಾಡುವ ಭರವಸೆ ನೀಡಿದ್ದರು ಎಂದು ಜಲೌನ್ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಸರ್ಕಲ್ ಆಫೀಸರ್ ಶಂಕರ್ ತ್ರಿಪಾಠಿ ಹೇಳಿದ್ದಾರೆ.
ಇತ್ತೀಚೆಗೆ ಮೃತ ರಮೇಶ್ ಪತ್ನಿ ತಾರಾ ಅವರು ಶಂಕರ್ ತ್ರಿಪಾಠಿ ಅವರನ್ನು ಭೇಟಿಯಾಗಿ ತನ್ನ ಪುತ್ರಿ ಶಿವಾನಿಗೆ ಜಾನ್ಸಿ ಜಿಲ್ಲೆಯಲ್ಲಿ ನಿಶ್ಚಯವಾಗಿದೆ ಏನಾದರು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಇದಾದ ನಂತರ ನಾವು ಈ ಮದುವೆಗಾಗಿ ಹಣವನ್ನು ಸಂಗ್ರಹಿಸಿದೆವು. ಸಾರ್ವಜನಿಕರು ಹಣ ನೀಡಿ ಸಹಾಯ ಮಾಡಿದರು. ಮದುವೆಗಾಗಿ ಸ್ಥಳವನ್ನು ನಿಗದಿ ಮಾಡಿದೆವು. ಬೈಕ್ ಸೇರಿದಂತೆ ಎಲ್ಲಾ ಮನೆ ಸಾಮಗ್ರಿಗಳನ್ನು ಉಡುಗೊರೆಯಾಗಿ ಸಂಗ್ರಹಿಸಿದೆವು ಜೊತೆಗೆ ಮದುವೆಗೆ ಬಂದವರ ಸತ್ಕಾರಕ್ಕಾಗಿ ಆಹಾರದ ವ್ಯವಸ್ಥೆ ಮಾಡಿದೆವು ಜೊತೆಗೆ ವಧುವಿಗೆ ಆಭರಣಗಳನ್ನು ಖರೀದಿಸಿದೆವು ಎಂದು ಅವರು ಹೇಳಿದ್ದಾರೆ. ನಂತರ ಮಾರ್ಚ್ 2 ರಂದು ಒರೈನ ಜಾನಕಿ ಪ್ಯಾಲೇಸ್ನಲ್ಲಿ ಈ ಅದ್ದೂರಿ ಮದ್ವೆ ನಡೆದಿದ್ದು, ಸಮೀಪದ ಜಿಲ್ಲೆಯ ಪೊಲೀಸರು ಮದುವೆಯಲ್ಲಿ ಸಾಕ್ಷಿಯಾದರು.