ನ್ಯೂಸ್ ನಾಟೌಟ್ : ಸಮಾಜದಲ್ಲಿ ರಾಜಕಾರಣಿಗಳು, ಸೆಲೆಬ್ರೆಟಿಗಳು, ಬ್ಯಸಿನೆಸ್ಮೆನ್ ಹೀಗೆ ಗುರುತಿಸಿಕೊಂಡ ವ್ಯಕ್ತಿಗಳಿಗೆ ಸಂಪೂರ್ಣ ಭದ್ರತೆ ನೀಡುವ ಬಗ್ಗೆ ನಿಮಗೆ ತಿಳಿದಿದೆ. ಆದರೆ ಪಂಜಾಬ್ನಲ್ಲಿ ಕೋಳಿಗೆ ದಿನದ 24 ಗಂಟೆಯೂ ಭದ್ರತೆ ನೀಡಲಾಗುತ್ತಿದೆ ಅಂದ್ರೆ ನೀವು ನಂಬ್ತೀರಾ? ಹೌದು ನೀವು ನಂಬಲೇಬೇಕು.
ಇಲ್ಲಿ ಪ್ರತಿ ದಿನ ಕೋಳಿಯ್ನು ಆರೈಕೆ ಮಾಡುತ್ತಾ, ಶಿಫ್ಟ್ ರೀತಿಯಲ್ಲಿ ದಿನದ 24 ಗಂಟೆ ಸೂಕ್ತ ಭದ್ರತೆ ನೀಡಲಾಗುತ್ತಿದೆ. ಇದೀಗ ಪಂಜಾಬ್ನಲ್ಲಿ ಹುಟ್ಟಿದರೆ ಕೋಳಿಯಾಗಿ ಹುಟ್ಟಬೇಕು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸಾಮಾನ್ಯ ಕೋಳಿಗೆ ಈ ರೀತಿ ಮರ್ಯಾದೆ ಸಿಕ್ಕಿರೋದ್ರ ಹಿಂದೆ ಕಥೆಯೇ ರೋಚಕವಾಗಿದೆ.
ಹೌದು, ಪಂಜಾಬ್ನ ಬಾಥಿಂದ ಗ್ರಾಮದಲ್ಲಿನ ಕೋಳಿ ಇದೀಗ ಇದೇ ಗ್ರಾಮದಲ್ಲಿರುವ ಬಾಥಿಂದ ಪೊಲೀಸ್ ಠಾಣೆಯಲ್ಲಿ ವಿಐಪಿಯಾಗಿದೆ. ಕರ್ನಾಟಕ ಕೆಲ ಭಾಗದಲ್ಲಿ ಕದ್ದುಮುಚ್ಚಿ ನಡೆಯುವ ಕೋಳಿ ಅಂಕ ಪಂಜಾಬ್ನಲ್ಲೂ ಭಾರಿ ಜನಪ್ರಿಯ.ಇದನ್ನು ಬಾಥಿಂದ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಮಾಹಿತಿ ಪಡೆದ ಪೊಲೀಸರು ನೇರವಾಗಿ ಆ ಜಾಗಕ್ಕೆ ದಾಳಿ ಮಾಡಿದ್ದಾರೆ.
ಬಾಥಿಂದ ಗ್ರಾಮದಲ್ಲಿ ಅತೀ ದೊಡ್ಡ ಕೋಳಿಅಂಕ ಆಯೋಜಿಲಾಗಿದ್ದು, ಪೊಲೀಸರ ದಾಳಿಯಾಗುತ್ತಿದ್ದಂತೆ ಹಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೋಳಿ ಅಂಕಕ್ಕೆ ಆಗಮಿಸಿದ ಹಲವರು ತಮ್ಮ ತಮ್ಮ ಕೋಳಿಗಳನ್ನ ಹಿಡಿದು ಪಲಾಯಾನ ಮಾಡಿದ್ದಾರೆ. ಕೋಳಿ ಅಂಕ ಆಯೋಜಕ ಸೇರಿದಂತೆ ಮೂವರು ಆರೋಪಿಗಳ ಪೈಕಿ ಒರ್ವನನ್ನು ಬಂಧಿಸಿದ್ದಾರೆ. ಇದೇ ವೇಳೆ ಒಂದು ಕೋಳಿ ಹಾಗೂ 12 ಟ್ರೋಫಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಓರ್ವ ಬಂಧಿತ ಆರೋಪಿ , ಕೋಳಿ ಹಾಗೂ 12 ಟ್ರೋಫಿಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ವಶದಲ್ಲಿರುವ ಈ ಕೋಳಿಗೆ ಇದೀಗ ಭದ್ರತೆ ನೀಡುವ ಅನಿವಾರ್ಯತೆ ಪಂಜಾಬ್ ಪೊಲೀಸರಿಗೆ ಎದುರಾಗಿದೆ.
ಅದಕ್ಕಾಗಿ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕೋಳಿಗೆ ಕಾಳು ಸೇರಿದಂತೆ ಭರ್ಜರಿ ಆಹಾರ ನೀಡಲಾಗುತ್ತಿದೆ. ಜೊತೆಗೆ ದಿನದ 24 ಗಂಟೆ ಕೋಳಿಗೆ ಭದ್ರತೆ ನೀಡಲಾಗುತ್ತದೆ. ಈ ಕೋಳಿಗೆ ಬಾರಿ ಬೇಡಿಕೆ ಇದ್ದು,ರಾತ್ರಿ ವೇಳೆ ಅಥವಾ ಪೊಲೀಸರ ಕಣ್ತಪ್ಪಿಸಿ ಕೋಳಿಯನ್ನು ಅಪಹರಿಸುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ಭದ್ರತೆ ನೀಡಲಾಗುತ್ತಿದೆ.