ನ್ಯೂಸ್ ನಾಟೌಟ್ : ದಲಿತರಿಗೆ ಗ್ರಾಮ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ(ಜ.೯) ಗೇರುಮರಡಿ ಗ್ರಾಮಸ್ಥರು ತರೀಕೆರೆಗೆ ಆಗಮಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅದಾದ ನಂತರ ಬಿಗಿ ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ನುಗ್ಗಿ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ಒಡೆದು ಬುಧವಾರ(ಜ.10) ಪೂಜೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿಯಲ್ಲಿ ಗೊಲ್ಲ ಸಮುದಾಯದ ಬೀದಿಗೆ ಬಂದಿದ್ದಕ್ಕೆ ದಲಿತ ಯುವಕನ ಮೇಲೆ ದಾ*ಳಿ ನಡೆದಿತ್ತು. ಅಲ್ಲದೆ, ದಲಿತರು ತಮ್ಮ ಬೀದಿಗೆ ಪ್ರವೇಶಿಸಿದ್ದರಿಂದ ಅಶುದ್ಧವಾಗಿದೆ ಎಂದು ಗ್ರಾಮದ ರಂಗನಾಥ ಸ್ವಾಮಿ ದೇವಾಲಯಕ್ಕೆ ಗೊಲ್ಲ ಸಮುದಾಯದ ಮುಖಂಡರು ಬೀಗ ಹಾಕಿದ್ದರು ಎನ್ನಲಾಗಿದೆ.
ಘಟನೆಯಿಂದಾಗಿ ಗೊಲ್ಲ ಸಮುದಾಯದ ವಿರುದ್ಧ ತರೀಕೆರೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದರು. ಬುಧವಾರ ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ಬಂದ ದಲಿತ ಮುಖಂಡರು, ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದು, ಪೂಜೆ ಸಲ್ಲಿಸಿದ್ದಾರೆ.
ಗೊಲ್ಲ ಸಮುದಾಯದಲ್ಲಿ ಮೂಢನಂಬಿಕೆ ಮನೆ ಮಾಡಿದೆ. ಹಲವಾರು ಅನಿಷ್ಠ ಪದ್ದತಿಗಳನ್ನು ಇಂದಿಗೂ ಸಮುದಾಯ ಆಚರಿಸುತ್ತಿದೆ. ಇದರಲ್ಲಿ ಸಮುದಾಯ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನೂ ಹೇಳತೀರದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ಸಮಯದಲ್ಲಿ, ಮುಟ್ಟಿನ ಸಂದರ್ಭದಲ್ಲಿ ಹಾಗೂ ಮಗುವಿಗೆ ಜನ್ಮವಿತ್ತ ಸಮಯದಲ್ಲಿ ಮಹಿಳೆಯರನ್ನು ಊರಿನ ಹೊರಡೆ ಗುಡಿಸಲಿನಲ್ಲಿ ಇರಿಸಲಾಗುತ್ತದೆ. ಹೆಣ್ಣು ಮಕ್ಕಳಲ್ಲಾಗುವ ನೈಸರ್ಗಿಕ ಕ್ರಿಯೆಯನ್ನು ಸಮುದಾಯವು ಅಶುದ್ಧವೆಂದು ಭಾವಿಸುತ್ತದೆ ಎಂದು ಗೊಲ್ಲ ಸಮುದಾಯದ ಬಗ್ಗೆ ಸ್ಥಳಿಯರು ಹೇಳಿಕೊಂಡಿದ್ದಾರೆ.