ನ್ಯೂಸ್ ನಾಟೌಟ್ : ಅದು 2014ರ ಸಮಯ. ಹೊಸದಿಗಂತ ಪತ್ರಿಕೆ ಬೆಂಗಳೂರು ಆವೃತ್ತಿಯಲ್ಲಿ ವರದಿಗಾರ ಕಮ್ ಉಪಸಂಪಾದಕನಾಗಿ ನಾನು ಕೆಲಸ ಮಾಡುತ್ತಿದ್ದೆ. ಮಾರ್ಚ್ ಮೊದಲ ವಾರದಲ್ಲಿ ನನ್ನ ಮೊಬೈಲ್ ಗೊಂದು ಕರೆ ಬಂತು. ‘ನಾನು ರವಿಶಂಕರ್ ಭಟ್ ಉದಯವಾಣಿ ಬೆಂಗಳೂರು ಆವೃತ್ತಿ ಸಹಾಯಕ ಸಂಪಾದಕ ಮಾತನಾಡುತ್ತಿದ್ದೇನೆ. ನೀವು ಒಳ್ಳೆಯ ಕೆಲಸಗಾರ ಎಂದು ಫೀಲ್ಡ್ ನಲ್ಲಿ ಹೇಳುವುದನ್ನ ಕೇಳಿದ್ದೇನೆ. ಒಳ್ಳೆಯ ಸ್ಟೋರಿಗಳನ್ನ ಮಾಡ್ತೀರಿ. ಹಾಗಿದ್ದ ಮೇಲೆ ನೀವು ನಮ್ಮ ಸಂಸ್ಥೆಗೆ ಏಕೆ ಜಾಯಿನ್ ಆಗಬಾರದು..? ಒಳ್ಳೆಯ ವೇತನ ಸಿಗುತ್ತದೆ. ಒಳ್ಳೆಯ ವೇದಿಕೆಯೂ ಹೌದು, ನೀವು ಒಪ್ಪುವುದಾದರೆ ಸಂಪಾದಕರಾದ ರವಿ ಹೆಗಡೆ (ಅಂದಿನ ಉದಯವಾಣಿ ಸಮೂಹ ಸಂಪಾದಕರು, ಇಂದಿನ ಕನ್ನಡ ಪ್ರಭ -ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರು) ಜೊತೆ ಮಾತನಾಡುತ್ತೇನೆ’ ಎಂದರು.
ನಾನು ಯೋಚಿಸಿ ಹೇಳುತ್ತೇನೆ ಸರ್ ಎಂದು ಉತ್ತರಿಸಿದೆ. ಮರುದಿನ ಮತ್ತೆ ರವಿಶಂಕರ್ ಭಟ್ ಅವರಿಂದ ಕರೆ ಬಂತು, ಸಂಪಾದಕರು ಲೈನ್ ನಲ್ಲಿ ಇದ್ದಾರೆ ಮಾತಾಡಿ ಅಂದ್ರು. ರವಿ ಹೆಗಡೆಯವರು ಅಷ್ಟು ಸುಲಭದಲ್ಲಿ ಮಾತನಾಡಲು ಸಿಗಲ್ಲ. ಸದಾ ಬ್ಯುಸಿ ಷೆಡ್ಯೂಲ್ ನಲ್ಲಿ ಇರ್ತಾರೆ. ಅಂತಹವರು ನನ್ನಂಥ ಕಿರಿಯನ ಜೊತೆ ನೇರವಾಗಿ ಫೋನ್ ನಲ್ಲಿ ಮಾತನಾಡಿದ ಆನಂದವನ್ನು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ‘ಹೇಮಂತ್ ..ನಮ್ಮಲ್ಲಿ ಒಳ್ಳೆ ಅವಕಾಶ ಇದೆ, ಬಂದು ಜಾಯಿನ್ ಆಗಿ ಅಂದ್ರು…ನಾನು ತಡವರಿಸಿಕೊಂಡು ಸರ್ ಸ್ಯಾಲರಿ..ಎಂದು ನೇರವಾಗಿ ವಿಷಯಕ್ಕೆ ಬಂದೆ. ಅದೆಲ್ಲ ಯೋಚನೆ ಬಿಡು.. ರವಿ ಶಂಕರ್ ಎಲ್ಲ ವ್ಯವಸ್ಥೆ ಮಾಡ್ತಾರೆ, ನೀವು ಬನ್ನಿ ಅಂದ್ರು. ಮತ್ತೆ ನಾನು ತಡ ಮಾಡಲಿಲ್ಲ. ಎರಡು ದಿನ ರಜೆ ಹಾಕಿ ರೆಸ್ಟ್ ತಗೊಂಡು ಹೊಸದಿಗಂತಕ್ಕೆ ರಾಜೀನಾಮೆ ಕೊಟ್ಟು ಉದಯವಾಣಿ ಕಡೆಗೆ ನಡೆದೆ.
ಸ್ವತಃ ನಾನೊಬ್ಬ ಅಥ್ಲೀಟ್ ಆಗಿದ್ದೆ. ನನ್ನಂಥವನಿಗೆ ಕ್ರೀಡಾ ವರದಿಗಾರಿಕೆ ಜೊತೆಗೆ ಡೆಸ್ಕ್ ನಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುವ ಸವಾಲು ಅಲ್ಲಿ ಕಾದಿತ್ತು. ಬೆಳಗ್ಗೆಲ್ಲ ರಿಪೋರ್ಟಿಂಗ್, ಸಂಜೆ ಹೊತ್ತಿಗೆ ಬ್ಯುರೋ ಮೀಟಿಂಗ್ ನಂತರ ಡೆಸ್ಕ್ ನಲ್ಲಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಕ್ರೀಡಾ ಸುದ್ದಿಗಳ ಅನುವಾದ. ಫೀಲ್ಡ್ ಗೆ ಇಳಿದು ಸ್ಟೋರಿಗಳನ್ನು ಮಾಡುವುದೆಂದರೆ ನನಗೆ ತುಂಬಾ ಇಷ್ಟವಾದ ವಿಷಯ. ರಸ್ತೆ ..ರಸ್ತೆಯಲ್ಲಿ ಅಡ್ಡಾಡಿ ಹಲವು ಅಡೆ ತಡೆಗಳ ನಡುವೆಯೂ ಒಳ್ಳೆಯ ಸ್ಟೋರಿಗಳನ್ನು ರೆಡಿ ಮಾಡುವುದು, ಸಂಜೆ ಕಚೇರಿಗೆ ಬಂದು ರವಿ ಶಂಕರ್ ಭಟ್ ಅವರ ಬಳಿ ಸರ್ ಈ ಸ್ಟೋರಿ ಹೀಗಿದೆ ಎಂದು ವರದಿ ಒಪ್ಪಿಸುವುದು. ಬ್ರೇಕಿಂಗ್ ಇದ್ದರೆ ಫೋನ್ ಮೂಲಕ ತಿಳಿಸಿ ಅಲರ್ಟ್ ಮಾಡುತ್ತಿದ್ದೆ. ಇದು ನನ್ನ ದೈನಂದಿನ ಕೆಲಸ. ಅವರು ನಾನು ತಂದ ಸ್ಟೋರಿ ಕಂಡು ಹಲವು ಸಲ ‘ಒಳ್ಳೆಯ ಸ್ಟೋರಿ ಕಣೋ..ಕೀಪ್ ಇಟ್ ಅಪ್ ..ಇದು ಮುಖಪುಟಕ್ಕೆ’ ಎಂದು ಮೀಟಿಂಗ್ ನಲ್ಲಿ ಹೇಳುತ್ತಿದ್ದರು. ಕೆಲಸದ ವಿಷಯದಲ್ಲಿ ಅವರು ರಾಕ್ಷಸ..! ಅಂತಹ ರಾಕ್ಷಸನ ಜೊತೆಗೆ ನಾನು ಕೂಡ ಮರಿ ರಾಕ್ಷಸನಾಗಿಯೇ ಬೆಳೆದೆ.
ಒಂದು ಸುದ್ದಿಯನ್ನು ಹೇಗೆ ತೆಗೆದುಕೊಳ್ಳಬೇಕು.. ಅದನ್ನು ಹೇಗೆ ವರದಿ ಮಾಡಬೇಕು..? ಅನ್ನೋದನ್ನು ಭಟ್ರು ಚೆನ್ನಾಗಿಯೇ ಹೇಳುತ್ತಿದ್ದರು. ಸುದ್ದಿ ಮನೆಯಲ್ಲಿ ಚೆನ್ನಾಗಿ ಬೈಯಿಸಿಕೊಳ್ಳದೆ.. ತಿದ್ದಿಸಿಕೊಳ್ಳದೆ.. ಅರೆಯಿಸಿಕೊಳ್ಳದೆ ಯಶಸ್ವಿ ಪತ್ರಕರ್ತ ಆಗಲಾರ. ನಿಜವಾದ ಪತ್ರಕರ್ತ ಹೇಗಿರುತ್ತಾನೆ ಅನ್ನುವ ಕಲ್ಪನೆಯೂ ಈಗಿನ ಕೆಲವು ಪತ್ರಕರ್ತರಿಗಿಲ್ಲ. ಅರ್ಥಾತ್ ಅವರ ರುಬ್ಬುವಿಕೆ ಕಾರ್ಯಕ್ರಮ ಡೆಸ್ಕ್ ನಲ್ಲಿ ಸರಿಯಾಗಿ ಆಗಿರುವುದಿಲ್ಲ. ಇಂದು ಅಸಲಿ ನಕಲಿ ಎಲ್ಲವೂ ಒಂದೇ ರೀತಿ ಕಂಡು ಪತ್ರಕರ್ತನಿಗಿರುವ ಮರ್ಯಾದೆಯೂ ಮಣ್ಣು ಪಾಲಾಗುತ್ತಿದೆ. ನಾವೆಲ್ಲರೂ ಸುದ್ದಿ ಮನೆಯ ರುಬ್ಬುವಿಕೆಗೆ ಒಳಗಾಗಿ ಬಂದವರು. ಭಟ್ರ ರುಬ್ಬುವಿಕೆಗೆ ತುತ್ತಾಗಿ ಎಷ್ಟೋ ಸಲ ತುಂಬಾ ಕಿರಿಕಿರಿ ಅನ್ನಿಸುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದೂ ಇದೆ.
ಈ ರಾಕ್ಷಸನ ಸಹವಾಸ ಸಾಕಪ್ಪ ಅಂತ ತುಂಬಾ ಸಲ ಬೈದುಕೊಂಡಿದ್ದು ಇದೆ. ಆ ದಿನಗಳಲ್ಲಿ ಅದುವೇ ಕಷ್ಟ ಅನ್ನಿಸುತ್ತಿತ್ತು. ಆದರೆ ಅವರಿಂದ ನಾನು ತುಂಬಾ ವಿಚಾರವನ್ನು ಕಲಿತಿದ್ದೇನೆ. ಒಂದೆರಡು ಘಟನೆಯನ್ನು ಇಲ್ಲಿ ಉದಾಹರಣೆ ಸಹಿತ ನೆನಪಿಸಿಕೊಳ್ತೇನೆ. ಒಮ್ಮೆ ‘ರಾಜ್ಯ ಅಥ್ಲೆಟಿಕ್ಸ್ ನಲ್ಲಿ ವ್ಯಾಪಕ ಡ್ರಗ್ಸ್ ಬಳಕೆ ..?’ ಅನ್ನುವ ಶೀರ್ಪಿಕೆಯಡಿಯಲ್ಲಿ ಒಂದು ಸ್ಟಿಂಗ್ ಆಪರೇಷನ್ ಸ್ಟೋರಿ ಮಾಡಿದ್ದೆ…(ಈಗಲೂ ಅದರ ಕಟ್ಟಿಂಗ್ ನನ್ನ ಫೇಸ್ ಪುಟದಲ್ಲಿದೆ ಓದಿ) ಅಂದಿನ ಗೃಹ ಸಚಿವ ಡಾ ಜಿ. ಪರಮೇಶ್ವರ್ (ಈಗಲೂ ಅವರೇ ಗೃಹ ಸಚಿವರು) ಅವರು ಆಗ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷರಾಗಿದ್ದರು. ಭಾರಿ ಚರ್ಚಗೆ ಕಾರಣವಾಗಿದ್ದ ಆ ಮುಖಪುಟದಲ್ಲಿ ಪ್ರಕಟವಾಗಿದ್ದ ಸ್ಟೋರಿಯನ್ನು ರಾಜ್ಯದ ಎಲ್ಲ ಟಿವಿ ಮಾಧ್ಯಮಗಳು ವರದಿ ಮಾಡಿದ್ದವು. ಪಬ್ಲಿಕ್ ಟಿವಿಯ ರಂಗನಾಥ್ ಸರ್ ಅವರು ಕೂಡ ಅಂದಿನ ಬಿಗ್ ಬುಲೆಟಿನ್ ನಲ್ಲಿ ಪತ್ರಿಕೆಯ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾದ ವಿಚಾರದ ಬಗ್ಗೆ ಮಾತನಾಡಿದ್ದರು. ಈ ವೇಳೆ ಕೆಲವರು (ಹಿತಶತ್ರುಗಳು) ನನ್ನ ವಿರುದ್ಧವಾಗಿ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಈ ವೇಳೆ ರವಿಶಂಕರ್ ಭಟ್ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದರು. ಜೊತೆಗೆ ರವಿ ಹೆಗಡೆ ಅವರ ಬಳಿ ಕರೆದುಕೊಂಡು ಹೋಗಿ ಇಡೀ ಸಂಸ್ಥೆ ನಿಮ್ಮ ಜೊತೆ ಇದೆ ಎಂಬ ಭರವಸೆಯನ್ನು ತುಂಬಿದ್ದರು. ಈ ಘಟನೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಬಹುಮುಖಿ ಅಂತ ಉದಯವಾಣಿ ಸಪ್ಲಿಮೆಂಟರಿ ಪೇಜ್ ಬರುತ್ತಿತ್ತು. ವಾರಕ್ಕೊಮ್ಮೆ ಅದಕ್ಕೆ ಎರಡು ಕ್ರೀಡಾ ವಿಶ್ಲೇಷಣೆ ನೀಡಬೇಕಿತ್ತು. ಅದಕ್ಕೆ ಆರ್ಟಿಕಲ್ ಹೊರಗಿನಿಂದ ರೆಡಿ ಮಾಡಿಸಬೇಕಿತ್ತು. ಕೆಲವರಿಗೆ ಅದರಿಂದ ಪೇಮೆಂಟ್ ಇರ್ತಿತ್ತು. ಕಚೇರಿ ಸಿಬ್ಬಂದಿ ಬರೆದರೆ ಏನೂ ಸಿಗುತ್ತಿರಲಿಲ್ಲ. ಹಾಗಾಗಿ ಈ ಬಹುಮುಖಿಗೆ ಬರೆಯಲು ಕಚೇರಿಯಲ್ಲಿ ಇರುವವರು ಹೆಚ್ಚಿನವರು ಆಸಕ್ತಿ ತೋರಿಸುತ್ತಿರಲಿಲ್ಲ. ಒಂದು ದಿನ ರವಿ ಶಂಕರ್ ಭಟ್ರು ನನ್ನನ್ನು ಕರೆದು ಇದಕ್ಕೆ ಒಳ್ಳೆಯ ಸ್ಟೋರಿಯನ್ನು ನೀನು ರೆಡಿ ಮಾಡು ಅಂದ್ರು. ನಾನು ನನ್ನದೇ ಶೈಲಿಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆಯ ಬಗೆಗಿನ ಸ್ಟೋರಿಯೊಂದನ್ನು ಬರೆದು ಗುರುಪ್ರಸಾದ್ ಜೊತೆ ಡಿಸೈನ್ ಮಾಡಿಸಿ ಪೇಜ್ ಪ್ರಿಂಟ್ ಔಟ್ ತೆಗೆದು ತೋರಿಸಿದೆ. ತುಂಬಾ ಚೆನ್ನಾಗಿ ಬರೆದಿದ್ದೀಯ ಕಣೋ.. ಅಂತ ಎಲ್ಲರ ಎದುರೇ ಹೊಗಳಿದ್ರು..ಅಲ್ಲೇ ಇದ್ದ ಹಿರಿಯ ಸಿನಿಮಾ ಪತ್ರಕರ್ತ ಚೇತನ್ ನಾಡಿಗೇರ್ ನನ್ನನ್ನೇ ಒಮ್ಮೆ ಅಚ್ಚರಿಯಿಂದ ನೋಡಿದರು. ನಾನೂ ಕೂಡ ಅವರತ್ತಲೇ ತಿಳಿ ನಗುವಿನ ನೋಟ ಬೀರಿದೆ. ಎಂಥ ಅದ್ಭುತ ಸಂಪಾಜೆ …ರವಿ ಶಂಕರ್ ಭಟ್ರ ಬಾಯಲ್ಲಿ ಈ ರೀತಿ ಹೊಗಳಿಕೆ ಮಾತು ಕೇಳೋದು ಅಂದ್ರೆ ಸಣ್ಣ ಮಾತಲ್ಲ.. ಅವರು ಯಾರನ್ನೂ ಹೀಗೆ ಹೊಗಳುವುದನ್ನು ನಾನು ನೋಡಿಯೇ ಇಲ್ಲ…ಬಾ ಭಟ್ರ ಹತ್ರ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳೋಣ ಅಂತ ಹೇಳಿ ನಗುತ್ತಲೇ ಫೋಟೋ ಕ್ಲಿಕ್ಕಿಸಿಕೊಂಡರು.
ಮುಂದೆ ನಾನು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಶ್ರೇಯಾಂಕ ನಂಬರ್ 1 ನಲ್ಲಿರುವಾಗಲೇ ವಿಶೇಷ ಸಂದರ್ಶನ ಮಾಡಿದೆ, ಕ್ರಿಕೆಟಿಗ ಶ್ರೀಶಾಂತ್ , ಪಾಕಿಸ್ತಾನದ ಸ್ನೂಕರ್ ಪಟು ಸಜ್ಜದ್ , ಅನಿಲ್ ಕುಂಬ್ಳೆ, ಕಪಿಲ್ ದೇವ್, ಪಿ.ವಿ.ಸಿಂಧು ಸೇರಿದಂತೆ ರಾಜ್ಯ ಹಾಗೂ ದೇಶದ ಅಗ್ರ ತಾರೆಯರನ್ನು ಸಂದರ್ಶನ ನಡೆಸಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಉದಯವಾಣಿಯ ಮುಖಪುಟದಲ್ಲಿ ಒಂದೇ ವರ್ಷ 21 ಸಲ ಮುಖಪುಟದಲ್ಲಿ ನನ್ನ ಬೈ ಲೈನ್ ಸಹಿತ ವಿಶೇಷ ವರದಿ ಪ್ರಕಟವಾಗಿದೆ. ಸರ್ಕಾರದ ಮೇಲೆ ಇಂಪ್ಯಾಕ್ಟ್ ಆಗಿರುವ ಸ್ಟೋರಿಯೂ ಸೇರಿಕೊಂಡಿದೆ. ಇದರ ಹಿಂದೆ ನನ್ನ ಕಠಿಣ ಪರಿಶ್ರಮ ಇತ್ತು ನಿಜ. ಆದರೆ ರವಿಶಂಕರ್ ಭಟ್ ಅವರ ನ್ಯೂಸ್ ಸೆನ್ಸ್ ಇಲ್ಲದಿರುತ್ತಿದ್ದರೆ ಅವುಗಳು ಮೂಲೆ ಸೇರುತ್ತಿದ್ದವು. ಒಬ್ಬ ಸಮರ್ಥ ನಾಯಕನಿದ್ದರೆ ಆತ ಉತ್ತಮ ವೇದಿಕೆಯನ್ನು ನೀಡಬಲ್ಲ ಅನ್ನೋದಕ್ಕೆ ಭಟ್ರೇ ಪ್ರತ್ಯಕ್ಷ ಉದಾಹರಣೆ. ಮುಂದೆ 2017-18ರಲ್ಲಿ ರವಿ ಹೆಗಡೆ ಜೊತೆ ರವಿ ಶಂಕರ್ ಭಟ್ ಸೇರಿದಂತೆ ಹಲವಾರು ಮಂದಿ ಏಷ್ಯಾ ನೆಟ್ ವರ್ಕ್ ನ ಕನ್ನಡ ಪ್ರಭಕ್ಕೆ ತೆರಳಿದರು. ನಾನು ಅವರ ಗೋಲ್ಡನ್ ಆಫರ್ ತಿರಸ್ಕರಿಸಿ ಉದಯವಾಣಿಯಲ್ಲೇ ಉಳಿದುಕೊಂಡೆ, ಉಳಿದುಕೊಂಡವನಿಗೆ ಆಗಿದ್ದೇನು..? ಮುಂದೆ ನಡೆದಿದ್ದೆಲ್ಲ ಈಗ ಬೇಡ ಬಿಡಿ. ಅದಕ್ಕೊಂದು ಬೇರೇಯೇ ವೇದಿಕೆ ಇಟ್ಟರಾಯ್ತು. ಆದರೆ ರವಿಶಂಕರ್ ಭಟ್ ಜೊತೆಗಿದ್ದಷ್ಟು ದಿನ ಸಿಕ್ಕಿದ ಪ್ರೋತ್ಸಾಹ, ಕೆಲಸದ ಖುಷಿ, ವಿವಿಧ ರಾಜ್ಯಗಳಿಗೆ ವಿಮಾನದಲ್ಲಿ ಪ್ರವಾಸದ ಭಾಗ್ಯ ಮತ್ತೆಲ್ಲೂ ಸಿಕ್ಕಿಲ್ಲ. ಒಂದು ಸಲ ವಿದೇಶಕ್ಕೂ ನನಗೆ ಹೋಗುವ ಅವಕಾಶ ಪಾಸ್ ಪೋರ್ಟ್ ಇಲ್ಲದೆ ಜಸ್ಟ್ ಮಿಸ್ ಆಗಿತ್ತು. ಅಂದು ನನ್ನ ಬದಲಿಗೆ ಕತಾರ್ ಗೆ ರವಿ ಶಂಕರ್ ಭಟ್ರೇ ಹೋಗಿ ಬಂದಿದ್ದರು. ಯುವ ಪತ್ರಕರ್ತರನ್ನು ಬೆಳೆಸುವ ಗುಣವಿರುವ ರವಿ ಶಂಕರ್ ಭಟ್ ಅವರು ಕೆಲಸದ ವಿಷಯದಲ್ಲಿ ಎಂದೂ ರಾಜಿಮಾಡಿದವರಲ್ಲ. ಅವರು ವಿಶ್ವಖ್ಯಾತ ಕ್ರಿಕೆಟಿಗ ಧೋನಿಯ ಅಪ್ಪಟ ಅಭಿಮಾನಿ ಆಗಿದ್ದರೂ ಕಾರ್ಯವೈಖರಿ ಮಾತ್ರ ಒಂಥರ ವಿರಾಟ್ ಕೊಹ್ಲಿ ಥರ ಅಗ್ರೆಸ್ಸಿವ್. ಯಾರೇ ಆಗಿದ್ದರೂ ತಪ್ಪನ್ನು ಅಡಗಿಸಿಡುವ ಪ್ರಶ್ನೆಯೇ ಇಲ್ಲ.
ಇಷ್ಟು ಸಮಯ ಉದಯವಾಣಿ ಪತ್ರಿಕೆಯನ್ನು ಓದುವುದನ್ನೇ ನಾನು ನಿಲ್ಲಿಸಿದ್ದೆ, ಇನ್ಮುಂದೆ ರವಿ ಶಂಕರ್ ಭಟ್ ಸಂಪಾದಕತ್ವದ ಉದಯವಾಣಿಯನ್ನು ಮತ್ತೆ ಓದುತ್ತೇನೆ. ಅವರ ಬರವಣಿಗೆ, ಪ್ಲಾನ್ , ಕಾರ್ಯವೈಖರಿಗೆ ಭರ್ಜರಿ ಜಯ ಸಿಗಲಿ ಅನ್ನೋದೇ ನನ್ನ ಪ್ರಾರ್ಥನೆ. wish u All the best sir..