ನ್ಯೂಸ್ ನಾಟೌಟ್: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ವೇಳೆ ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಇಂದು(ಡಿ.5) ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿತು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಚಾತುರ್ಯ ನಡೆದು ರಕ್ಷಣೆಗೆ ನಿಂತು ಹೋರಾಡುತ್ತಿದ್ದ ಅರ್ಜುನನ ಮೇಲೆಯೇ ಗುಂಡು ಬಿದ್ದಿದೆ ಎಂದು ಮಾವುತರು ಮಾತನಾಡಿಕೊಳ್ಳುತ್ತಿದ್ದು, ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳೇಬರವನ್ನು ಮೈಸೂರಿಗೆ ಕರೆತರುವಂತೆ ಕೆಲ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದರು. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು ಎನ್ನಲಾಗಿದೆ.
ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯುತ್ತಿದ್ದ ವೇಳೆ ಕೆಲ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಪೊಲೀಸರು ಲಾಠಿ ಚಾರ್ಜ್ ಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದರು. ಓಡುವ ಬರದಲ್ಲಿ ಕೆಲವರು ಬಿದ್ದು ಏಟು ಮಾಡಿಕೊಂಡಿದ್ದಾರೆ.
ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನ ಅಂತ್ಯಕ್ರಿಯೆಗೂ ಮುನ್ನ ಮೂರು ಸುತ್ತು ಕುಶಾಲತೋಪು ಹಾರಿಸಿ, ಸಕಲ ಪೊಲೀಸ್ ಗೌರವವನ್ನೂ ಸಲ್ಲಿಸಲಾಯಿತು. ರಾಜಮನೆತನದ ಪುರೋಹಿತ ಪ್ರಹ್ಲಾದ್ ತಂಡದಿಂದ ಪೂಜಾ ವಿಧಿವಿಧಾನ ನೇರವೇರಿಸಲಾಯಿತು.